×
Ad

ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಈಡಿ ವಿಚಾರಣೆಗೆ ಹಾಜರಾದ ಡಿ.ಕೆ. ಸುರೇಶ್

Update: 2025-06-23 20:06 IST

ಬೆಂಗಳೂರು: ಐಶ್ವರ್ಯಾ ಗೌಡ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ತಮ್ಮ ವಕೀಲರೊಂದಿಗೆ ಸೋಮವಾರ ಇಲ್ಲಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ(ಈ.ಡಿ)ದ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾದರು.

ಐಶ್ವರ್ಯಾ ಗೌಡ ತನ್ನನ್ನು ಡಿ.ಕೆ.ಸುರೇಶ್ ಸಹೋದರಿ ಎಂದು ಪರಿಚಯಿಸಿಕೊಂಡು, ಹಲವರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ, ಸೋಮವಾರ ಬೆಳಗ್ಗೆ 11.15ಕ್ಕೆ ವಿಚಾರಣೆಗೆ ಹಾಜರಾದ ಸುರೇಶ್, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.

ಏನಿದು ಪ್ರಕರಣ?: ಐಶ್ವರ್ಯಾ ಗೌಡ ತನ್ನನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಗಳು, ಉದ್ಯಮಿಗಳಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ವಾರಾಹಿ ವಲ್ರ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್.ಐತಾಳ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಐಶ್ವರ್ಯಾ ಗೌಡ ಸಾಲದ ರೂಪದಲ್ಲಿ 9.82 ಕೋಟಿ ರೂ.ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ್ದಾರೆ ಎಂದು ವನಿತಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಈ.ಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ-ಡಿ.ಕೆ.ಸುರೇಶ್:

ಈ.ಡಿ ವಿಚಾರಣೆಗೆ ಹಾಜರಾಗುವ ಮುನ್ನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಈ.ಡಿ.ಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ ಎಂದು ಹೇಳಿದರು.

ಈ.ಡಿ ನೋಟಿಸ್ ರಾಜಕೀಯ ಷಡ್ಯಂತ್ರವೆಂದು ನಿಮಗೆ ಅನಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧವಿದೆ, ಯಾವುದು ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಗಳು ಈ.ಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಏನು ಮಾಡುತ್ತಾರೆ ಎಂದು ನೋಡೋಣ ಎಂದು ಸುರೇಶ್ ಮಾರ್ಮಿಕವಾಗಿ ನುಡಿದರು.

ಐಶ್ವರ್ಯಾ ಗೌಡ ನಿಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ನಿಮ್ಮ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಐಶ್ವರ್ಯಾ ಗೌಡ ಮೂರ್ನಾಲ್ಕು ಬಾರಿ ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇನೆ ಎಂದು ಸುರೇಶ್ ತಿಳಿಸಿದರು.

ನಟರೊಬ್ಬರು ನಿಮ್ಮ ದನಿ ಅನುಕರಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆಯ ಬೆಳವಣಿಗೆ ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಹೇಳಿದರು.

ಸುರೇಶ್ ವಿಚಾರಣೆ ವೈಭವೀಕರಿಸುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್

ಈ.ಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ. ಯಾರದ್ದೋ ಹೇಳಿಕೆ ಮೇಲೆ ಡಿ.ಕೆ.ಸುರೇಶ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಇದನ್ನು ಮಾಧ್ಯಮಗಳು ವೈಭವೀಕರಿಸುವ ಅಗತ್ಯವಿಲ್ಲ. ಈ ಹಿಂದೆ ನನ್ನ ಮೇಲೂ ಈ.ಡಿ ಪ್ರಕರಣ ದಾಖಲಿಸಿತ್ತು. ಅದು ಏನಾಯ್ತು? ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಕೊನೆಗೆ ನಮಗೆ ರಕ್ಷಣೆ ನೀಡಿದ್ದು ನ್ಯಾಯಾಂಗ ವ್ಯವಸ್ಥೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನ ಬಂದಾಗ ಅವರನ್ನು ಭೇಟಿ ಮಾಡುವು ಸಹಜ. ಈ.ಡಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸುರೇಶ್ ತಯಾರಿದ್ದಾರೆ. ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕಾದ ಪ್ರಕರಣಗಳನ್ನು ಬಿಟ್ಟು, ಇದನ್ನು ಹೆಚ್ಚು ಬಿಂಬಿಸಲು ಮುಂದಾಗಿದ್ದೀರಿ. ಇದರ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News