×
Ad

ಗ್ಯಾರಂಟಿಗಳಿಗೆ 1.16 ಲಕ್ಷ ಕೋಟಿ ರೂ.ಅನುದಾನ ಒದಗಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

Update: 2026-02-02 20:22 IST

ಬೆಂಗಳೂರು : ರಾಜ್ಯವನ್ನು ಸರ್ವತೋಮುಖವಾಗಿ ಬೆಳೆಸುವ ಉದ್ದೇಶ ನಮಗಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇದುವರೆಗೆ 1.16 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಅನುದಾನ ಒದಗಿಸಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರ ಕೊಂಡುಕೊಳ್ಳುವ ಶಕ್ತಿ ಆರೋಗ್ಯಕರವಾಗಿದೆ. ನೀವು ಬಡವರ, ಮಧ್ಯಮ ವರ್ಗದವರ ವಿರೋಧಿಗಳು. ಹಾಗಾಗಿ ಇದು ನಿಮಗೆ ಕಾಣುವುದಿಲ್ಲ ಎಂದು ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಜನರು ವಿಪರೀತ ಸಂಕಷ್ಟದಲ್ಲಿದ್ದಾರೆ. ಅವರ ದುಡಿಮೆಗಳೆಲ್ಲ ನಿಂತು ಹೋಗಿವೆ, ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಹಾಗಾಗಿ ಪ್ರತಿ ಕುಟುಂಬಕ್ಕೆ ಒಂದು ಸಾರಿ 10 ಸಾವಿರ ರೂ.ಕೊಡಿ ಎಂದು ಯಡಿಯೂರಪ್ಪ ಮತ್ತು ಬೊಮ್ಮಾಯಿಗೆ ಹೇಳಿದ್ದೆ. ನೀವು ಒಂದು ರೂಪಾಯಿಯಾದ್ರೂ ಕೊಟ್ರಾ? ಎಂದು ಪ್ರಶ್ನಿಸಿದರು.

ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ?: ಜನ ಸಂಕಷ್ಟದ ಸುಳಿಯಲ್ಲಿದ್ದಾಗ ನಿಮ್ಮ ಸಂವೇದನೆ ಎಲ್ಲಿ ಹೋಗಿತ್ತು? ನಿಮಗೆ ಆಕ್ಸಿಜನ್ ಕೊಟ್ಟು ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ? ರೋಗಿಗಳು ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ? ನಮಗೆ ಸಂವೇದನೆಯಿದೆ. ಪಶುಪಾಲಕರ ಕುರಿ-ಮೇಕೆ, ಎತ್ತು, ಎಮ್ಮೆ, ಹಸು, ಕೋಣ ಮರಣ ಹೊಂದಿದರೆ ಪರಿಹಾರ ಕೊಡುತ್ತಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ರಿ, ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ರಿ ಆಗ ನಿಮಗೆ ಸಂವೇದನೆ ನೆನಪಾಗಲಿಲ್ವೆ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಆಗ ನಿಮ್ಮ ಆಡಳಿತ ಹದಗೆಟ್ಟಿರಲಿಲ್ಲವೆ? ದಲಿತರು, ಹಿಂದುಳಿದ ವರ್ಗಗಳ ನೆನಪಾಗಿರಲಿಲ್ಲವೆ? ನಾವು ದಲಿತ ಸಮುದಾಯದ ಆತಂಕ ಕೇಳಿಸಿಕೊಂಡಿದ್ದೇವೆ. ಅದಕ್ಕಾಗಿಯೇ ದಲಿತರ ಭೂಮಿ ಬಲಾಢ್ಯರ ಕೈಗೆ ಹೋಗಬಾರದೆಂದು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಸಂವೇದನಾ ಶೀಲ ಸರಕಾರ ಆಗಿರುವುದರಿಂದಲೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಮನವಿಗೆ ಮಣಿದು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಉಲ್ಲೇಖಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಗೊಬ್ಬರ ಕೊಡಲಾಗದೆ ಹಾವೇರಿಯಲ್ಲಿ ಗೋಲಿಬಾರ್ ಮಾಡಿ ಕೊಂದು ಹಾಕಲಾಯಿತು. ಆದರೆ ಮುಧೋಳದಲ್ಲಿ ರೈತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಟ್ರ್ಯಾಕ್ಟರ್ ಮುಂತಾದ ವಾಹನ, ರೈತರ ಕಬ್ಬಿಗೆ ಬೆಂಕಿ ಹಚ್ಚಿದಾಗಲೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿದ್ದೇವೆಯೆ ಹೊರತು ನಾವು ಗೋಲಿಬಾರ್ ಮಾಡಿ ಕೊಲ್ಲಲು ಹೋಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕೇಂದ್ರ ಸರಕಾರದ ಅಸಹಕಾರದ ನಡುವೆಯೂ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳವನ್ನು 250 ರೂ. ವರೆಗೆ ಪ್ರೋತ್ಸಾಹ ಧನ ನೀಡುವುದರ ಮೂಲಕ ಸುಮಾರು 40 ಲಕ್ಷ ಕ್ವಿಂಟಾಲ್ ಜೋಳ ಖರೀದಿ ಮಾಡಲಾಗುತ್ತಿದೆ. ಕೆಎಂಎಫ್ ಮೂಲಕ ಖರೀದಿಸಲು ಹಾಗೂ ಎಥೆನಾಲ್ ಉತ್ಪಾದಕರು, ಪೌಲ್ಟ್ರಿ, ಪಶು ಆಹಾರ ತಯಾರಕರ ಜೊತೆ ಸಭೆ ಮಾಡಿ ಮೆಕ್ಕೆಜೋಳ ಖರೀದಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದಿವಾಳಿಯಾಗಿರುವ ಕೇಂದ್ರ ಸರಕಾರ:

ಪ್ರಕೃತಿ ವಿಕೋಪಕ್ಕೆ ಕಳೆದ ತಿಂಗಳು 250 ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ 2,445 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನಮ್ಮ ಸರಕಾರ ದಿವಾಳಿಯಾಗಿಲ್ಲ. ಕೇಂದ್ರ ಸರಕಾರ ದಿವಾಳಿ ಆಗಿದೆ. ನಿನ್ನೆ ಕೇಂದ್ರ ಸರಕಾರ ಬಜೆಟ್ ಮಂಡಿಸಿದೆ. ಮನೆಗಳ ನಿರ್ಮಾಣಕ್ಕೆ 19,490 ಕೋಟಿ ರೂ. ಇದ್ದ ಅನುದಾನವನ್ನು ಪರಿಷ್ಕೃತ ಅಂದಾಜಿನಲ್ಲಿ 7500 ಕೋಟಿ ರೂ.ಗಳಿಗೆ ಇಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಬಜೆಟ್‍ನಲ್ಲಿ 8,260 ಕೋಟಿ ರೂ.ಇಟ್ಟು, ಪರಿಷ್ಕರಣೆ ಮಾಡಿ 6,372 ಕೋಟಿ ರೂ.ಮಾಡಿದ್ದಾರೆ. 2026-27ರಲ್ಲಿ 6,587 ಕೋಟಿ ರೂ.ಗಳಿಗೆ ಇಳಿಸಿದ್ದಾರೆ. ಪಿಎಂ ಇಂಟರ್ನ್‍ಶಿಪ್ ಪ್ರೋ ಗ್ರಾಂ ನಲ್ಲಿ 10,831 ಕೋಟಿ ರೂ. ಇಟ್ಟಿದ್ದರು, ಅದನ್ನು 526 ಕೋಟಿ ರೂ.ಗಳಿಗೆ ಪರಿಷ್ಕರಣೆ ಮಾಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆ 5,100 ಕೋಟಿ ರೂ.ಗಳಿಂದ 3,861 ಕೋಟಿ ರೂ.ಗಳಿಗೆ ಇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ನಾವು ಮೂರು ವರ್ಷದಿಂದ ಬಜೆಟ್ ನಲ್ಲಿ ಬೆಲೆ ಏರಿಸಿದ್ದರೂ., ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಿದೆ. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ 2023-24 ರಿಂದ ಇಲ್ಲಿಯವರೆಗೆ 1,17,197 ಕೋಟಿ ರೂ.ಗಳನ್ನು ನೀಡಿದ್ದೇವೆ. ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೆ ನಮ್ಮ ಅವಧಿಯಲ್ಲಿ 1538.60 ಕೋಟಿ ರೂ.ಗಳನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳಿಗಾಗಿ 2023-24 ರಿಂದ ಈವರೆಗೆ 220 ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

2013-14 ರಿಂದ 18ರ ಅವಧಿಯಲ್ಲಿ ನಾವು 15 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದೇವು. ಈ ಪೈಕಿ 14.52 ಲಕ್ಷ ಮನೆಗಳನ್ನು ನಿರ್ಮಿಸಲಾಯಿತು. ಆದರೆ, ಬಿಜೆಪಿಯವರು ನಾಲ್ಕು ವರ್ಷಗಳಲ್ಲಿ ಕೇವಲ 5 ಲಕ್ಷ ಮನೆಗಳನ್ನು ಮಾತ್ರ ಕಟ್ಟಿದರು. ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ನಮ್ಮ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಆದುದರಿಂದ, ರಾಜ್ಯಪಾಲರು, ಸರಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ಮುಖ್ಯಮಂತ್ರಿ ತಿಳಿಸಿದರು.

ಪ್ರತಿಪಕ್ಷಗಳ ಸಭಾತ್ಯಾಗ:

‘ಗುತ್ತಿಗೆದಾರರ ಸಂಘದವರು ಈ ಸರಕಾರವನ್ನು ಶೇ.65ರಷ್ಟು ಕಮಿಷನ್ ಸರಕಾರ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಸರಕಾರ ಉತ್ತರ ಕೊಟ್ಟಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ 5 ಸಾವಿರ ಕೋಟಿ ರೂ.ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಆ ಹಣ ಎಲ್ಲಿ ಹೋಯಿತು ಗೊತ್ತಿಲ್ಲ. ಇದೊಂದು ‘ಇಲ್ಲಗಳ ಸರಕಾರ’ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಜ.22ರಂದು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News