×
Ad

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನಹಾನಿಗೆ ಕೋರಿ ಕೋರ್ಟ್ ಮೊರೆ ಹೋದ ಮಾಜಿ ಸಚಿವ ಡಾ.ಕೆ.ಸುಧಾಕರ್

Update: 2023-07-01 20:22 IST

ಬೆಂಗಳೂರು, ಜು.1: ಮಾಜಿ ಸಚಿವ ಡಾ.ಕೆ.ಸುಧಾಕರ್ ತನ್ನ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಮಾನಹಾನಿ ಮಾಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದಾರೆ.

ಪ್ರದೀಪ್ ಈಶ್ವರ್ ವಿರುದ್ಧ ಐಪಿಸಿ ಸೆಕ್ಷನ್ 36, 37, 109, 112, 113, 114, 117, 120ಬಿ, 388, 500, 501. 504, 505, 506 ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಸುಧಾಕರ್ ಕೋರಿದ್ದಾರೆ. ಸುಧಾಕರ್ ಪರವಾಗಿ ವಕೀಲೆ ಪಿ.ಎಲ್.ವಂದನಾ ವಕಾಲತ್ತು ಹಾಕಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಶಾಸಕ ಪ್ರದೀಪ್ ಈಶ್ವರ್ ಪದೇ ಪದೇ ಸಾರ್ವಜನಿಕವಾಗಿ ತನ್ನ ವಿರುದ್ಧ ಹಗೆತನದಿಂದ ಕೂಡಿದ, ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ದಂಗೆ ಎಬ್ಬಿಸಿ ತನ್ನ ಬದುಕು, ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಇತರೆ ಕಾನೂನುಗಳ ಅಡಿ ಅಪರಾಧವಾಗಿದೆ ಎಂದು ಸುಧಾಕರ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಚಿವನಾಗಿ ಕೆಲಸ ಮಾಡಿರುವುದರ ಬಗ್ಗೆಯೂ ಆಕ್ಷೇಪಾರ್ಹವಾದ ಹೇಳಿಕೆ ನೀಡಿದ್ದು, ಭ್ರಷ್ಟ ಎಂದು ಜರಿದಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತನ್ನನ್ನು ಸೋಲಿಸುವುದೇ ಗುರಿ ಎಂದು ಪ್ರದೀಪ್ ಹೇಳಿದ್ದು, ಇದು ವೈಯಕ್ತಿಕ ಪ್ರತೀಕಾರವೂ ಆಗಿದೆ. ಸೋತ ಬಳಿಕ ತಾನು ಜನರ ಬಗ್ಗೆ ಕಾಳಜಿ ತೋರುತ್ತಿದ್ದು, ನಾಲ್ಕು ವರ್ಷಗಳಿಂದ ಜನರಿಗೆ ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಡಾ. ಕೆ ಸುಧಾಕರ್ ಸಮರ್ಥಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News