ಡಿಕೆಶಿ ಸಂಪುಟದಲ್ಲಿ ಡಾ.ಶರಣಪ್ರಕಾಶ್ ಪಾಟೀಲ್‌ಗೆ ಸ್ಥಾನ; ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಸಿಎಂ ಡಿಕೆಶಿ ಸಚಿವ ಸಂಪುಟದಲ್ಲಿ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕೂಡಾ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ದಿನಗಳಲ್ಲೇ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಮೂಲಕ ರಾಜಕೀಯ ಪ್ರವೇಶಿಸಿದ ಡಾ.ಶರಣಪ್ರಕಾಶ್ ಪಾಟೀಲ್ ಅವರು, 2004ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, 2008, 2013 ಮತ್ತು 2023ರಲ್ಲೂ ಗೆಲುವು ಸಾಧಿಸಿ ತಮ್ಮ ರಾಜಕೀಯ ಪ್ರಭಾವವನ್ನು ವಿಸ್ತರಿಸಿದರು.
ರುದ್ರಪ್ಪ ಪಾಟೀಲ್, ಮಾಲಕಮ್ಮ ಪಾಟೀಲ್ ಅವರ ಪುತ್ರನಾಗಿ 1967ರ ಏಪ್ರಿಲ್ 20ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿಯಲ್ಲಿ ಜನಿಸಿದ ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ವೃತ್ತಿಯಿಂದ ರಾಜಕೀಯಕ್ಕೆ ಬಂದವರು. ಎಂಬಿಬಿಎಸ್ ಹಾಗೂ ಡರ್ಮಾಟಾಲಜಿಯಲ್ಲಿ ಎಂಡಿ ಪದವಿ ಪಡೆದಿರುವ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸೇಡಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
2013ರಿಂದ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದರು.
ರಾಜಕೀಯ ಪಯಣ :
2004ರಂದು ಮೊದಲ ಬಾರಿ ಶಾಸಕರಾಗಿ ಆಯ್ಕೆ
2008ರಂದು ಎರಡನೇ ಬಾರಿ ಶಾಸಕರಾಗಿ ಆಯ್ಕೆ
2013ರಂದು ವೈದ್ಯಕೀಯ ಶಿಕ್ಷಣ ಸಚಿವರಾಗಿ ಆಯ್ಕೆ
2023ರಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ಸಚಿವರಾಗಿ ಆಯ್ಕೆಯಾಗಿದ್ದರು.