ಡಿಕೆಶಿ ಸಂಪುಟದಲ್ಲಿ ಈಶ್ವರ್ ಖಂಡ್ರೆಗೆ ಸ್ಥಾನ; ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ
ಈಶ್ವರ್ ಖಂಡ್ರೆ
ಬೀದರ್ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಸಿಎಂ ಡಿಕೆಶಿ ಸಚಿವ ಸಂಪುಟದಲ್ಲಿ ಈಶ್ವರ್ ಖಂಡ್ರೆ ಕೂಡಾ ಸ್ಥಾನ ಪಡೆದಿದ್ದಾರೆ.
ಈಶ್ವರ್ ಖಂಡ್ರೆ ಅವರು ಸ್ವತಂತ್ರ ಹೋರಾಟಗಾರ, ಮಾಜಿ ಸಚಿವ ದಿ.ಭೀಮಣ್ಣ ಖಂಡ್ರೆ ಹಾಗೂ ತಾಯಿ ದಿ.ಲಕ್ಷ್ಮಿಬಾಯಿ ಅವರ ಪುತ್ರರಾಗಿದ್ದಾರೆ. ಇವರು ಗುಲ್ಬರ್ಗಾ ವಿಶ್ವವಿದ್ಯಾಲಯದ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ (ಮೆಕ್ಯಾನಿಕಲ್) ಪದವಿ ಮುಗಿಸಿದ್ದಾರೆ.
ಈಶ್ವರ್ ಖಂಡ್ರೆ ಅವರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ಡಾ.ಗುರುಪ್ರಸಾದ್ ಖಂಡ್ರೆ ಅವರು ವೈದ್ಯರಾಗಿದ್ದಾರೆ. ಕಿರಿಯ ಮಗ ಸಾಗರ್ ಖಂಡ್ರೆ ಅವರು 2024ರ ಬೀದರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದಾರೆ.
ಈಶ್ವರ್ ಖಂಡ್ರೆ ಅವರು ಮೊಟ್ಟ ಮೊದಲು ಬಾರಿ 2008ರಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅದಾದ ನಂತರ 2013, 2018 ಹಾಗೂ 2023 ರಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2016ರಿಂದ 2018ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪುರಸಭೆ ಆಡಳಿತ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿದ್ದರು. 2018ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಅವರು ಇದೀಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
2026ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಆಯ್ಕೆಯಾಗಿದ್ದಾರೆ.