ಡಿಕೆಶಿ ಸಂಪುಟ ಸೇರಿದ ಬೆಂಗಳೂರಿನ ನಾಲ್ವರು ಪ್ರಭಾವಿ ನಾಯಕರು ಯಾರ್ಯಾರು?
ಬೆಂಗಳೂರು : ಕರ್ನಾಟಕ ರಾಜಕಾರಣದಲ್ಲಿ ಬಹುನಿರೀಕ್ಷಿತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ "ಟ್ರಬಲ್ ಶೂಟರ್" ಖ್ಯಾತಿಯ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು (ಜೂನ್ 3) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಜಿ.ಪಮೇಶ್ವರ್ ಸಹಿತ 13 ಸಚಿವರಿಗೆ ಪ್ರಮಾಣವಚನ ಭೋಧಿಸಿದರು.
ಡಿಕೆಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆದ ಬೆಂಗಳೂರಿನ ಸಚಿವರು ಯಾರ್ಯಾರು?:
ಕೆ.ಜೆ.ಜಾರ್ಜ್:
ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಜೆ.ಜಾರ್ಜ್ ಅವರು, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಕೇರಳ ಮೂಲದ ಕೆ.ಸಿ.ಜೋಸೆಫ್ ಮತ್ತು ಮರಿಯಮ್ಮ ದಂಪತಿಯ ಪುತ್ರನಾಗಿ 1949ರ ಆಗಸ್ಟ್ 24ರಂದು ಹುಟ್ಟಿದ ಕೆ.ಜೆ.ಜಾರ್ಜ್ ಅವರು, ತಮ್ಮ ವಿದ್ಯಾರ್ಥಿದೆಸೆಯಲ್ಲೇ ಕಾಂಗ್ರೆಸ್ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಆ ಬಳಿಕ ಕೇರಳದಿಂದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಗೆ ಜಾರ್ಜ್ ಅವರ ಕುಟುಂಬ ಬಂದು ನೆಲೆಸಿತು.
1968ರಲ್ಲೇ ಕೊಡಗು ಜಿಲ್ಲೆ ವಿರಾಜಪೇಟೆ ಗೋಣಿಕೊಪ್ಪಲು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜಾರ್ಜ್ ಅವರು, 1972ರಿಂದ 1973ರ ವರೆಗೆ ಕೊಡಗು ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯುವ ಕಾಂಗ್ರೆಸ್ ಖಜಾಂಚಿ, ಯುವ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪಕ್ಷದ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕ್ರೈಸ್ತ ಸಮುದಾಯದ ಪ್ರಭಾವಿ ಮುಖಂಡರು ಆಗಿದ್ದು, 1985ರಲ್ಲಿ ಬೆಂಗಳೂರಿನ ಭಾರತೀನಗರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶಿಸಿದ ಕೆ.ಜೆ.ಜಾರ್ಜ್ ಅವರು, ವೀರೇಂದ್ರ ಪಾಟೀಲ್ ಹಾಗೂ ಎಸ್. ಬಂಗಾರಪ್ಪ ನೇತೃತ್ವದ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದರು. 2023ರಲ್ಲಿ ಪುನಃ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಇಂಧನ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ರಾಮಲಿಂಗಾರೆಡ್ಡಿ:
ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಮಲಿಂಗಾರೆಡ್ಡಿ ಅವರು, 1953ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ರಾಮಲಿಂಗಾರೆಡ್ಡಿ ಅವರು ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿ ಗಮನಾರ್ಹ ದಾಖಲೆ ನಿರ್ಮಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ವಿಜ್ಞಾನದಲ್ಲಿ ಪದವೀಧರರಾಗಿದ್ದು, ಬೆಂಗಳೂರಿನ ಸರಕಾರಿ ವಿಜ್ಞಾನ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಆಸಕ್ತಿ ಹೊಂದಿದ್ದ ಇವರು 1973-74ರಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆ ಬಳಿಕ ಎನ್‍ಎಸ್‍ಯುಐ ಮೂಲಕ ರಾಜಕೀಯ ಬಂದ ಅವರು, 1983-1988ರ ವರೆಗೆ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಆಯ್ಕೆಯಾಗುವ ಮೂಲಕ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 1989ರಲ್ಲಿ ಮೊದಲ ಬಾರಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.
ಜಯನಗರ ಕ್ಷೇತ್ರದಿಂದ ಸತತ 4 ಬಾರಿ ಹಾಗೂ ಬಿಟಿಎಂ ಲೇಔಟ್ ಕ್ಷೇತ್ರದಿಂದ 4 ಬಾರಿ ಸೇರಿದಂತೆ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ಅನುಭವಿ ನಾಯಕರಾಗಿರುವ ಇವರು 2013 ರಿಂದ 2017ರ ವರೆಗೆ ರಾಜ್ಯದ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು.
2017 ರಿಂದ 2018ರ ವರೆಗೆ ಗೃಹ ಖಾತೆ ಸಚಿವರಾಗಿದ್ದರು. 2021ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2023ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.
ಕೃಷ್ಣ ಭೈರೇಗೌಡ:
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೃಷ್ಣ ಭೈರೇಗೌಡ ಅವರು, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕೋಲಾರ ಮೂಲದ ಕೃಷ್ಣ ಭೈರೇಗೌಡ ಅವರು ಮಾಜಿ ಸಚಿವ ಸಿ.ಭೈರೇಗೌಡ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರನಾಗಿ 1973ರ ಎಪ್ರಿಲ್ 4 ರಂದು ಜನಿಸಿದರು. 1994 ರಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1999 ರಲ್ಲಿ ವಾಷಿಂಗ್ಟನ್‍ನಲ್ಲಿರುವ ಅಮೇರಿಕನ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಇಂಟನ್ರ್ಯಾಷನಲ್ ಸರ್ವಿಸ್‍ನಿಂದ ಸ್ನಾತಕೋತ್ತರ ಪದವಿ (ಎಂಎ) ಪದವಿ ಪಡೆದಿದ್ದಾರೆ.
ಕೃಷ್ಣ ಭೈರೇಗೌಡ 2003ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದು, ಮೊದಲ ಬಾರಿಗೆ ಅಖಿಲ ಭಾರತ ಪ್ರಗತಿಪರ ಜನತಾ ದಳ ಪಕ್ಷದಿಂದ 2003ನೆ ಸಾಲಿನಲ್ಲಿ ಕೋಲಾರ ಜಿಲ್ಲೆಯ ಅಂದಿನ ವೇಮಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಂತ ಕಿರಿಯ ಶಾಸಕ ಎಂಬ ಹೆಗ್ಗಾಳಿಕೆಗೆ ಪಾತ್ರರಾಗಿದ್ದರು.
2004ರಲ್ಲಿ ಅಖಿಲ ಭಾರತ ಪ್ರಗತಿಪರ ಜನತಾ ದಳ ಪಕ್ಷವನ್ನು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾದರು. 2007 ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ಆನಂತರ 2008 ರಲ್ಲಿ ಕೃಷ್ಣ ಭೈರೇಗೌಡ ಬೆಂಗಳೂರಿನ ನಗರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು.
2009ರ ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ)ದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ 2013ನೆ ಸಾಲಿನಲ್ಲಿಯೂ ಗೆಲುವು ಸಾಧಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2018ನೆ ಸಾಲಿನಲ್ಲಿ ಬಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದರು. ಬಳಿಕ 2023ನೆ ಕಾಂಗ್ರೆಸ್ ಸರಕಾರದಲ್ಲಿ ಕಂದಾಯ ಸಚಿವರಾಗಿ ಆಯ್ಕೆಯಾಗಿದ್ದರು.
ಬೈರತಿ ಸುರೇಶ್:
ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬೈರತಿ ಸುರೇಶ್ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಲ್ಲೇ ರಾಜಕೀಯವಾಗಿ ಬೆಳೆದು ಬಂದಿದ್ದಾರೆ. ಇದೀಗ ನೂತನ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಯಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ.
1972ರ ಜುಲೈ 19ರಂದು ಬೆಂಗಳೂರಿನಲ್ಲಿ ಹುಟ್ಟಿದ ಬೈರತಿ ಸುರೇಶ್ ಅವರು ಕೃಷಿ, ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡುವರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿಗೆ ಸೇರಿಕೊಂಡರೂ ರಾಜಕೀಯಕ್ಕೆ ಪ್ರವೇಶಿಸಿದ್ದರಿಂದ ಅದನ್ನು ಪೂರ್ಣಗೊಳಿಸಲಿಲ್ಲ.
2012ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬೈರತಿ ಸುರೇಶ್ ಅವರು, 2018ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಶಾಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಎರಡನೆ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿ, ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ.
ಇದೀಗ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.