ಜು.8ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಈಡಿ ಸೂಚಿಸಿದೆ: ಡಿ.ಕೆ. ಸುರೇಶ್
ಬೆಂಗಳೂರು: ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಜಾರಿ ನಿರ್ದೇಶನಾಲಯ(ಈ.ಡಿ)ದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ, ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಇನ್ನೂ ಒಂದಷ್ಟು ಮಾಹಿತಿ ಬೇಕಾಗಿರುವುದರಿಂದ ಜು.8ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ಸೋಮವಾರ ಶಾಂತಿ ನಗರದಲ್ಲಿರುವ ಜಾರಿ ನಿರ್ದೇಶನಾಲಯ(ಈ.ಡಿ)ಕಚೇರಿಯಲ್ಲಿ ವಿಚಾರಣೆಗೊಳಗಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ.ಡಿ ಅಧಿಕಾರಿಗಳ ತನಿಖೆಗೆ ಸಂಪೂರ್ಣವಾದ ಸಹಕಾರ ಕೊಟ್ಟಿದ್ದೇನೆ. ಈ ಪ್ರಕರಣದಲ್ಲಿ ಅನೇಕರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೆಲವರು ನನ್ನ ಹೆಸರು ನಂಬಿ ಹಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಹಣ ಕಳೆದುಕೊಂಡಿರುವವರು ಈ.ಡಿ ವಿಚಾರಣೆ ವೇಳೆ ಅವರ ಹೇಳಿಕೆಗಳನ್ನು ದಾಖಲಿಸುವಾಗ ನನ್ನ ಹೆಸರು ಉಲ್ಲೇಖ ಮಾಡಿದ್ದಾರೆ. ಆದುದರಿಂದ, ಅವರಿಗೆ ಸಂಬಂಧಪಟ್ಟ ವಿಷಯಗಳ ಕುರಿತು ನನಗೆ ಪ್ರಶ್ನೆಗಳನ್ನು ಕೇಳಿದರು. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಗೊತ್ತಿಲ್ಲ, ನಾನಂತು ಯಾವುದಕ್ಕೂ ಭಾಗಿದಾರನಲ್ಲ ಎಂದು ಸುರೇಶ್ ತಿಳಿಸಿದರು.
ಐಶ್ವರ್ಯಾ ಗೌಡ ನನಗೆ ಪರಿಚಯವಿರಲಿಲ್ಲ. ಅವರು ನನ್ನ ಕ್ಷೇತ್ರದವರು ಒಮ್ಮೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು, ನಾನು ಹೋಗಿದ್ದೆ. ಆನಂತರ ನಾನು ಭಾಗವಹಿಸಿದ್ದ ಒಂದೆರಡು ಕಾರ್ಯಕ್ರಮಗಳಲ್ಲಿ ಅವರು ಇದ್ದರು. ಅದು ಬಿಟ್ಟರೆ ನನಗೆ ಅವರ ಬ್ಯಾಂಕಿನ ವ್ಯವಹಾರ, ಹಣಕಾಸಿನ ವ್ಯವಹಾರ, ಚಿನ್ನದ ವಿಚಾರ ಯಾವುದು ಗೊತ್ತಿಲ್ಲ. ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಲ್ಲವೂ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಕಾನೂನು ಕಾನೂನು ಪಾಲನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ನನ್ನ ಹೆಸರು ದುರ್ಬಳಕೆ ಆಗಿರುವುದರಿಂದ ಕೆಲವು ವಿಚಾರಗಳಲ್ಲಿ ನಾನು ಈ.ಡಿ ಅಧಿಕಾರಿಗಳಿಗೆ ಸಹಕಾರ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲಿ ರಾಜಕೀಯ ಪಿತೂರಿ ಇದೆಯೋ, ಇಲ್ಲವೋ ಎಂಬುದರ ಕುರಿತು ಈಗ ಏನು ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡೋಣ ಎಂದು ಸುರೇಶ್ ತಿಳಿಸಿದರು.