Photo: X/@ECISVEEP

ಬೆಂಗಳೂರು: ಮತದಾರರ ಪಟ್ಟಿಯಿಂದ ಅಳಿಸಲಾದ ವ್ಯಕ್ತಿಗಳ ಮತದಾರರ ಗುರುತಿನ ಚೀಟಿ (EPIC) ಸಂಖ್ಯೆಯನ್ನೇ ಇತರರಿಗೆ ನೀಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿವೆ. 'ವಿಶೇಷ ತೀವ್ರ ಪರಿಷ್ಕರಣೆ' (SIR) ವೇಳೆ ಪಟ್ಟಿಯಿಂದ ಕೈಬಿಟ್ಟವರ EPIC ಸಂಖ್ಯೆಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಬೇರೆ ವ್ಯಕ್ತಿಗಳ ಹೆಸರಿನ ಮುಂದೆ ದಾಖಲಾಗಿರುವ ಕನಿಷ್ಠ 290 ಪ್ರಕರಣಗಳನ್ನು 'The Hindu' ತನಿಖಾ ವರದಿ ಪತ್ತೆಹಚ್ಚಿದೆ.

SIR ಪ್ರಕ್ರಿಯೆಗೂ ಮೊದಲು ಒಬ್ಬ ವ್ಯಕ್ತಿಯನ್ನು ಗುರುತಿಸಲು ಬಳಸಲಾಗಿದ್ದ EPIC ಸಂಖ್ಯೆಯನ್ನು ಈಗ ಮತ್ತೊಬ್ಬ ವ್ಯಕ್ತಿಯನ್ನು ಗುರುತಿಸಲು ಬಳಸಲಾಗುತ್ತಿದೆ. ಅಂದರೆ, ಮತದಾರರ ಪಟ್ಟಿಯಿಂದ ಹೆಸರು ಅಳಿಸಿದ ಬಳಿಕವೂ ಅವರ ಗುರುತಿನ ಚೀಟಿ ಸಂಖ್ಯೆಯನ್ನು ಉಳಿಸಿಕೊಂಡು, ಅದನ್ನು ಮತ್ತೊಬ್ಬರಿಗೆ ನೀಡಲಾಗಿದೆ.

EPIC ಸಂಖ್ಯೆ ಮರುಬಳಕೆಗೆ ಚುನಾವಣಾ ಆಯೋಗದ ನಿಷೇಧ:

'ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು ಅಥವಾ ನಕಲಿ' (ASDD) ಎಂದು ಗುರುತಿಸಿ SIR ವೇಳೆ ಕೆಲವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆದರೆ, ಅವರ EPIC ಸಂಖ್ಯೆಗಳು ಅಂತಿಮ ಪಟ್ಟಿಯಲ್ಲಿ ಇತರರ ಹೆಸರಿನ ಮುಂದೆ ಕಾಣಿಸಿಕೊಂಡಿವೆ.

ಭಾರತೀಯ ಚುನಾವಣಾ ಆಯೋಗದ (ECI) 'ಚುನಾವಣಾ ನೋಂದಣಿ ಅಧಿಕಾರಿಗಳ ಕೈಪಿಡಿ'ಯಲ್ಲಿ, ಒಮ್ಮೆ ವ್ಯಕ್ತಿಗೆ ನೀಡಲಾದ EPIC ಸಂಖ್ಯೆಯನ್ನು ಮತ್ತೆ ಬಳಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. EPIC ಸಂಖ್ಯೆಗಳ ಸೃಷ್ಟಿಗೆ ಬಳಸುವ ತಂತ್ರಾಂಶವು ಈಗಾಗಲೇ ನೀಡಲಾದ ಸಂಖ್ಯೆಗಳ ದಾಖಲೆಯನ್ನು ಇಟ್ಟುಕೊಳ್ಳಬೇಕು ಹಾಗೂ ಒಮ್ಮೆ ಬಳಸಿದ ಸಂಖ್ಯೆಯನ್ನು ಮತ್ತೆ ಬಳಸದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಕೈಪಿಡಿ ಸೂಚಿಸುತ್ತದೆ.

ಒಬ್ಬ ವ್ಯಕ್ತಿಗೆ ನೀಡಲಾದ EPIC ಸಂಖ್ಯೆಯನ್ನು ಮತ್ತೊಬ್ಬರಿಗೆ ನೀಡುವಂತಿಲ್ಲ. ಮತದಾರರ ಗುರುತಿನ ಸಂಖ್ಯೆಯಲ್ಲಿ ಸಾರ್ವತ್ರಿಕತೆ, ಅನನ್ಯತೆ ಮತ್ತು ಶಾಶ್ವತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದೂ ಚುನಾವಣಾ ಆಯೋಗ ಹೇಳಿದೆ.

ದಾಸರಹಳ್ಳಿಯಲ್ಲಿ ಹಲವು ಪ್ರಕರಣ:

ASDD ಪಟ್ಟಿಯನ್ನು ಅಂತಿಮ SIR ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡುವ ಮೂಲಕ ಈ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಪಟ್ಟಿಯಿಂದ ತೆಗೆದುಹಾಕಲಾದ ವ್ಯಕ್ತಿಗಳ EPIC ಸಂಖ್ಯೆಗಳು ಅಂತಿಮ ಪಟ್ಟಿಯಲ್ಲಿ ಇತರರ ಹೆಸರಿನ ಮುಂದೆ ದಾಖಲಾಗಿವೆಯೇ ಎಂಬುದನ್ನು ಪರಿಶೀಲಿಸಿದಾಗ ಈ ವ್ಯತ್ಯಾಸಗಳು ಕಂಡುಬಂದಿವೆ. ಇಂತಹ ಹಲವು ಪ್ರಕರಣಗಳು ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾಗಿವೆ.

ದಾಸರಹಳ್ಳಿಯ ಭಾಗ ಸಂಖ್ಯೆ 103ರಲ್ಲಿ ಮತದಾರರಾಗಿದ್ದ ಶಶಿಕುಮಾರ್ ಅವರನ್ನು 'ಮೃತಪಟ್ಟವರು' ಎಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆದರೆ, ಅವರ EPIC ಸಂಖ್ಯೆಯನ್ನು ಈಗ ಅದೇ ಕ್ಷೇತ್ರದ ಭಾಗ ಸಂಖ್ಯೆ 273ರಲ್ಲಿ ನೋಂದಾಯಿತರಾಗಿರುವ ಚಂದ್ರಮ್ಮ ಅವರಿಗೆ ನೀಡಲಾಗಿದೆ.

ಅದೇ ರೀತಿ, ಭಾಗ ಸಂಖ್ಯೆ 107ರಲ್ಲಿ ಮತದಾರರಾಗಿದ್ದ ರೂಪಾ ಅವರನ್ನು 'ಗೈರುಹಾಜರು' ಎಂದು ಗುರುತಿಸಿ ಪಟ್ಟಿಯಿಂದ ಕೈಬಿಡಲಾಗಿತ್ತು. ಅವರ EPIC ಸಂಖ್ಯೆಯನ್ನು ಈಗ ಭಾಗ ಸಂಖ್ಯೆ 174ರಲ್ಲಿ ನೋಂದಾಯಿತರಾಗಿರುವ ಪಲ್ಲವಿ ಅವರ ಹೆಸರಿನ ಮುಂದೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ, ದಾಸರಹಳ್ಳಿಯ ಭಾಗ ಸಂಖ್ಯೆ 109ರಲ್ಲಿ ಮತದಾರರಾಗಿದ್ದ 41 ವರ್ಷದ ಕರಿಯಪ್ಪ ಅವರನ್ನು 'ಗೈರುಹಾಜರು' ಎಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಅವರ EPIC ಸಂಖ್ಯೆಯು ಈಗ ಭಾಗ ಸಂಖ್ಯೆ 53ರಲ್ಲಿ ನೋಂದಾಯಿತರಾಗಿರುವ ವಿಜಯಶ್ರೀ ಅವರ ಹೆಸರಿನ ಮುಂದೆ ಕಾಣಿಸಿಕೊಂಡಿದೆ.

ಇದೇ ಭಾಗ ಸಂಖ್ಯೆ 109ರಲ್ಲಿ ಮತದಾರರಾಗಿದ್ದ ಶಿವಣ್ಣ ಅವರನ್ನು 'ಸ್ಥಳಾಂತರಗೊಂಡಿದ್ದಾರೆ' ಎಂಬ ಕಾರಣಕ್ಕೆ ಪಟ್ಟಿಯಿಂದ ಕೈಬಿಡಲಾಗಿತ್ತು. ಅವರ EPIC ಸಂಖ್ಯೆಯು ಈಗ ಅದೇ ಕ್ಷೇತ್ರದ ಭಾಗ ಸಂಖ್ಯೆ 57ರಲ್ಲಿ ನೋಂದಾಯಿತರಾಗಿರುವ ತೇಜಸ್ವಿನಿ ಅವರ ಹೆಸರಿನ ಮುಂದೆ ದಾಖಲಾಗಿದೆ.

ಪರಿಶೀಲನೆಗೆ CEO ಕಚೇರಿಗೆ ಮಾಹಿತಿ:

ಈ ವ್ಯತ್ಯಾಸಗಳ ಕುರಿತು ಸ್ಪಷ್ಟನೆ ಕೋರಿ 'the hindu' EPIC ಸಂಖ್ಯೆಗಳ ಕೆಲವು ಮಾದರಿಗಳನ್ನು ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಗೆ ಸಲ್ಲಿಸಿದೆ.

ಈ ಪ್ರಕರಣಗಳನ್ನು ಪರಿಶೀಲಿಸುವುದಾಗಿ ತಿಳಿಸಿರುವ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್, ಪರಿಶೀಲನೆ ಪೂರ್ಣಗೊಳ್ಳುವ ಮೊದಲು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor