ಶಾಂತಿ ಸಹಬಾಳ್ವೆಯ ಬುದ್ಧನ ದೇಶದಲ್ಲಿ ಇಂದು ಅಸಹನೆ, ಧರ್ಮಾಂಧತೆ ದ್ವಿಗುಣಗೊಂಡಿದೆ: ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ಶಾಂತಿ ಸಹಬಾಳ್ವೆಯ ಬುದ್ಧನ ದೇಶದಲ್ಲಿ ಇಂದು ಅಸಹನೆ, ಧರ್ಮಾಂಧತೆ, ವ್ಯಕ್ತಿಪೂಜೆ, ಸರ್ವಾಧಿಕಾರಿ ಧೋರಣೆ ದ್ವಿಗುಣಗೊಂಡಿದ್ದು, ಇದರಿಂದ ಪ್ರಜಾಪ್ರಭುತ್ವದ ಅಳಿವು ಎಂಬಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2007ರಲ್ಲಿ ವಿಶ್ವಸಂಸ್ಥೆ ಧರ್ಮಾಂಧತೆ, ಸರ್ವಾಧಿಕಾರಿ ಆಡಳಿತ, ಸಮಾಜಕ್ಕೆ ಮಾರಕವಾಗಿದ್ದು, ಪ್ರಜಾಪ್ರಭುತ್ವ ಮಾತ್ರವೇ ಸೂಕ್ತ ಎಂಬ ನಿಲುವಿನಲ್ಲಿ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಘೋಷಣೆ ಮಾಡಿತು. ಬ್ರಿಟನ್, ಫ್ರಾನ್ಸ್, ಅಮೆರಿಕದಂತಹ ರಾಷ್ಟ್ರಗಳು ಕ್ರಾಂತಿಯ ಮೂಲಕ ಪ್ರಜಾಪ್ರಭುತ್ವ ದೇಶಗಳಾಗಿ ಬದಲಾಗಿವೆ. ಪ್ರಜಾಪ್ರಭುತ್ವ ಸಮಸ್ತ ಜನರ ಧ್ವನಿಯನ್ನು ಜಾರಿ ಮಾಡಲು ಇರುವ ಬಲವಾದ ವ್ಯವಸ್ಥೆ ಇದಾಗಿದೆ ಎಂದು ಹೇಳಿದರು.
ಒಂದು ವೇಳೆ ನಾವು ಕಷ್ಟಪಟ್ಟು ಬೆಳೆಸಿದ ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ ಮತ್ತೆ ನಾವು ಪ್ರಜಾಪ್ರಭುತ್ವಗಳಿಸುವುದು ಕಷ್ಟ ಸಾಧ್ಯತೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೀಗಾಗಿ, ದೇಶದ ಪ್ರತಿಯೊಬ್ಬರೂ ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧವಾಗಿರಬೇಕು ಎಂದ ಅವರು, ರಾಜಕೀಯ ಸ್ವಾತಂತ್ರ್ಯದಿಂದ ಸಾರ್ಥಕತೆ ಸಿಗುವುದಿಲ್ಲ. ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಭಾರತ ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರಾರಂಭಿಸಿ, ಆಚರಣೆ ಮಾಡುತ್ತಿದ್ದೇವೆ. ಈ ಪ್ರಜಾಪ್ರಭುತ್ವ ದಿನಾಚರಣೆ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಹೆಮ್ಮೆಯ ದಿನವಾಗಿದೆ ಎಂದರು.
ಸಮಾಜದಲ್ಲಿ ಸಮಾನತೆ ಕಾಪಾಡುವ ಮೂಲಕ ಬಸವಣ್ಣವರ ಚಿಂತನೆಯಲ್ಲಿ ದಾಪುಗಾಲು ಹಾಕಬೇಕು. ಇದಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ಕೆಲಸ ಮಾಡಬೇಕು. ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಪ್ರತಿಯೊಬ್ಬ ನಾಗರಿಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ, ಮಕ್ಕಳಿಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಕರೆ ನೀಡಿದರು.