×
Ad

ನಿರ್ದೇಶಕ ಎಸ್.ನಾರಾಯಣ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿ : ದೂರು ದಾಖಲು

Update: 2025-07-30 20:48 IST

ಬೆಂಗಳೂರು : ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವ ಆರೋಪದಡಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.

ಈ ಸಂಬಂಧ ಬುಧವಾರ ನಗರ ಪೊಲೀಸ್ ಆಯುಕ್ತರಿಗೆ ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಅವರು ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದ ನಟರಾದ ಶಿವ ರಾಜ್‍ಕುಮಾರ್, ಪುನೀತ್, ಸುದೀಪ್ ಸೇರಿದಂತೆ ಹಲವು ನಟರನ್ನು ಗುರಿಯಾಗಿಸಿ, ನಾನು ಪೋಸ್ಟ್ ಮಾಡಿರುವಂತೆ ಅವಹೇಳಕಾರಿಯಾಗಿ ಅಪರಿಚಿತ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿ ವಿಕೃತಿ ಮೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನನ್ನ ಹೆಸರಿನಲ್ಲಿ ಫೇಸ್ ಬುಕ್ ಖಾತೆಯಿಲ್ಲ. ಆದರೂ ಕಿಡಿಗೇಡಿಗಳು ನಕಲಿ ಖಾತೆ ತೆರೆದು ನಟರಿಗೆ ತೇಜೋವಧೆಯಾಗುವ ರೀತಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಆರೇಳು ತಿಂಗಳಿಂದ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ. ಇತ್ತೀಚೆಗೆ ಇದು ನನ್ನ ಗಮನಕ್ಕೆ ಬಂದಿದೆ. ಚಿತ್ರರಂಗದ ಎಲ್ಲಾ ನಟರೊಂದಿಗೆ ನಾನು ಚೆನ್ನಾಗಿದ್ದೇನೆ. ಯಾರು ಇಂತಹ ಕಿಡಿಗೇಡಿ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದು ಎಸ್.ನಾರಾಯಣ್ ತಿಳಿಸಿದರು.

ವೈಯಕ್ತಿಕವಾಗಿ ತೇಜೋವಧೆ ಮಾಡುವ ಟ್ರೋಲ್‍ಗಳು ಕನ್ನಡ ಚಿತ್ರರಂಗದ ಅಭ್ಯುದಯಕ್ಕೆ ಮಾರಕವಾಗಿದೆ. ಬೇರೆ ಭಾಷೆಗಳ ಚಿತ್ರೋದ್ಯಮಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಮೆಸೇಜ್ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಯಾವುದೇ ವಿಷಯದ ಬಗ್ಗೆ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮಿತಿ ಮೀರಿ ಟ್ರೋಲ್ ಮಾಡುವುದು ಸರಿಯಲ್ಲ ಎಂದು ಎಸ್.ನಾರಾಯಣ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News