ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ನಕಲಿ ಜಿಪಿಎಸ್ ಫೋಟೋ ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶ ನೀಡಿದ್ದಾರೆ.

ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿ ಮೇಟಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೆಲಸಗಾರರು ಹೋಗದಿದ್ದರೂ ವಿಡಿಯೊ ಚಿತ್ರೀಕರಣ ಮಾಡಿಸಿ ಆ ವಿಡಿಯೊ ಪ್ಲೇ ಆಗುತ್ತಿರುವಾಗ ಮತ್ತೊಂದು ಮೊಬೈಲ್‍ನಲ್ಲಿ ಜಿಪಿಎಸ್ ಫೋಟೋ ತೆಗೆಸಿ ವಂಚಿಸುತ್ತಿದ್ದಾರೆಂದು ಮಾಧ್ಯಮದಲ್ಲಿ ವರದಿಯಾಗಿದ್ದು, ಈ ಬಗ್ಗೆ ಜಂಟಿ ನಿರ್ದೇಶಕರ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 4 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಈ ರೀತಿ ನಕಲಿ ಜಿಪಿಎಸ್ ಫೋಟೋ ತೆಗೆದು ಪ್ರತಿನಿತ್ಯ 20 ರಿಂದ 30 ಸಾವಿರ ರೂಪಾಯಿ ವಂಚನೆ ಜತೆಗೆ, ಕೆಲಸ ಮಾಡದೆಯೇ ಹಾಜರಾತಿ ಹಾಕಿಸುತ್ತಿದ್ದಾರೆಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಈಶ್ವರ್ ಖಂಡ್ರೆ, ವರದಿಯಲ್ಲಿ ಅಂಶ ಸತ್ಯವಾಗಿದ್ದಲ್ಲಿ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಶಿಫಾರಸಿನೊಂದಿಗೆ ವಾಸ್ತವಾಂಶದ ವರದಿಯನ್ನು ಸಲ್ಲಿಸುವಂತೆ ಮತ್ತು ಈ ರೀತಿ ತಂತ್ರಜ್ಞಾನವನ್ನೆ ವಂಚಿಸಿ ಹಾಜರಾತಿ ಹಾಕದಂತೆ ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ಉಪಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ಯಂತ್ರಗಳ ಮೂಲಕ ಕಾಮಗಾರಿ ನಡೆಸಿ, ಕೂಲಿ ಕಾರ್ಮಿಕರ ಅಕ್ರಮ ಹಾಜರಾತಿ ಹಾಕಿಸುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿಯಡಿ ಕೂಲಿಗೆ ಬರುವವರು ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಜಿಪಿಎಸ್ ಫೋಟೋ ತೆಗೆದು ಎನ್‍ಎಂಎಂಎಸ್ ಆ್ಯಪ್ ನಲ್ಲಿ ಅಪ್‍ಲೋಡ್ ಮಾಡುವುದನ್ನು ಕಡ್ಡಾಯ ಮಾಡಿಲಾಗಿದೆ. ಆದರೆ ಕೆಲವರು ಈ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು, ಸರಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor