ಕರ್ನಾಟಕಕ್ಕೆ ಬರ ಪರಿಹಾರ ವಿಚಾರ: ಕೇಂದ್ರ ಸರಕಾರದ ಬದಲು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದ ಆರ್. ಅಶೋಕ್
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (File Photo)
ಬೆಂಗಳೂರು: ಬರಗಾಲಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ನಮ್ಮ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಿಲ್ಲ. ಅದರ ಬದಲು ಕೇವಲ 2,500 ರೂ. ನೀಡಿ ಕೈ ತೊಳೆದುಕೊಳ್ಳಲಾಗಿದೆ. ಆದ್ದರಿಂದ ಕೇಂದ್ರ ಸರಕಾರದ ಬಳಿ ನಿಯೋಗ ಹೋಗುವ ಬದಲು ನಾವು ಜನರ ಬಳಿಗೆ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 50 ಲಕ್ಷ ರೈತರಿಗೆ 1,250 ಕೋಟಿ ರೂ. ನೀಡಲಾಗುತ್ತಿದೆ. ಆದರೆ ಬರಗಾಲದ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಬಗ್ಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಸ್ತೂರಿ ರಂಗನ್ ವರದಿ ಕುರಿತು ಸರ್ವಾನುಮತದ ನಿರ್ಣಯದ ಬಗ್ಗೆ ನಮ್ಮನ್ನು ಕೇಳಿ, ಚರ್ಚಿಸಿ ಮಾಹಿತಿ ಪಡೆದು ಮನವಿ ಸಿದ್ದಪಡಿಸಿದರು. ಬರದ ವಿಷಯದಲ್ಲಿ ಆ ಕೆಲಸ ಮಾಡಿಲ್ಲ ಎಂದರು.
ರಾಜ್ಯ ಸರಕಾರ ರೈತರಿಗೆ ಭಿಕ್ಷೆ ನೀಡಿದಂತೆ ಪರಿಹಾರ ನೀಡುತ್ತಾರೆ. ಆದರೆ ಗ್ಯಾರಂಟಿ ಸಮಿತಿಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಭಾರತ್ ಜೋಡೋ ಸಮಿತಿಗಳಿಗೆ 1,110 ಕೋಟಿ ರೂ. ನೀಡಲಾಗುತ್ತಿದೆ. ಈ ಸಮಿತಿಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಸೀಮಿತವಾಗಿರಲಿದೆ. ಕಾಂಗ್ರೆಸ್ ಪಕ್ಷದವರಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಗಂಜಿ ಕೇಂದ್ರ ಆರಂಭಿಸುತ್ತಾರೆ. ಆದರೆ, ರೈತರಿಗೆ ಬಿಡಿಗಾಸು ನೀಡಲಾಗುತ್ತಿದೆ. ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮಗೆ ಪತ್ರ ಬರೆದು ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ಮನವಿ ಮಾಡಿದ್ದಾರೆ. ಆದರೆ ಸರಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಯೇ ಇಲ್ಲ. ಕುಡಿಯುವ ನೀರಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ವಪಕ್ಷ ನಿಯೋಗ ಹೋಗಬೇಕೆಂದರೆ ಬರಗಾಲದ ಬಗ್ಗೆ ನಮ್ಮ ಜೊತೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ರಾಜಕೀಯ ಮಾಡಲಾಗಿದೆ ಎಂದು ದೂರಿದರು.
ಬರಗಾಲದಿಂದಾಗಿ ರೈತರು ಸಾಯುವ ಪರಿಸ್ಥಿತಿಗೆ ಹೋಗಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಯುವಕ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಹಾಗೂ ಇನ್ನೊಬ್ಬ ರೈತ ಕೆ.ಎಂ.ದೊಡ್ಡಿ ಬಳಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ದನಕರುಗಳಿಗೆ ನೀರಿಲ್ಲ, ಮನಸ್ಸಿಗೆ ಬಂದಂತೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಖಜಾನೆಯ ಮೇಲೆ ಒತ್ತಡ ಅಧಿಕವಾಗಿದೆ. ಈ ನಾಲ್ಕು ದಿನಗಳ ಅಧಿವೇಶನದ ವಿಶೇಷ ಚರ್ಚೆಯಲ್ಲಿ ಈ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಅಷ್ಟೆಲ್ಲಾ ಮನವರಿಕೆ ಮಾಡಿದರೂ ಎಕರೆಗೆ ಕನಿಷ್ಟ 25,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿತ್ತು. ವಿಬಿ ಜಿ ರಾಮ್‍ಜಿ ಮೂಲಕ ವಲಸೆ ಹೋಗುವವರನ್ನು ತಡೆಯಿರಿ ಎಂದು ಆಗ್ರಹಿಸಲಾಗಿತ್ತು. ಆದರೆ ಈ ಯಾವುದೇ ಆಗ್ರಹಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ಘೋಷಿಸಲಾಗಿದೆ. ಆದರೆ, ಬಿಡುಗಡೆ ಮಾಡಿಲ್ಲ. ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಬರ ಬಂದು ಇಷ್ಟು ತಿಂಗಳಾದರೂ ಇನ್ನೂ ಅಂದಾಜು ಮಾಡುವುದರಲ್ಲೇ ಇದ್ದಾರೆ. ಸರಕಾರ ನಷ್ಟದಲ್ಲಿದೆ ಎಂದು ನಾನು ಹೇಳುತ್ತಿದ್ದೇನೆ. ಹಾಗಾದರೆ ಹಣಕಾಸಿನ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಲಿ. ಯಾವುದೇ ಮುಖ್ಯಮಂತ್ರಿ ಮಾಡದಷ್ಟು ಸಾಲವನ್ನು ಇವರು ಮಾಡಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಬೇಕಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇದ್ದರು.