ಮಹೇಶ್ ಬಾಬು , ಜಹಾಂಗೀರ್ ಇನಾಂದಾರ್

ಬೆಂಗಳೂರು: ರಾಜ್ಯದ ಮಹಾಲೇಖಪಾಲ (ಅಕೌಂಟೆಂಟ್ ಜನರಲ್–AG) ಹಾಗೂ ಪ್ರಧಾನ ಮಹಾಲೇಖಪಾಲ (ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್–PAG) ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಕಲ್ಯಾಣ ನಿಗಮದ ಆಡಳಿತ ನಿರ್ದೇಶಕ ಎನ್. ಮಹೇಶ್ ಬಾಬು ನಿಂದನಾತ್ಮಕ ಹಾಗೂ ಬೆದರಿಕೆ ಹೇಳಿಕೆ ನೀಡಿದ್ದಾರೆಂಬ ಆರೋಪಗಳ ಕುರಿತು ತನಿಖೆ ನಡೆಸಿ, ಆರೋಪಗಳು ದೃಢಪಟ್ಟರೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮಹಾಲೇಖಪಾಲರು (ಆಡಿಟ್-I) ಕಚೇರಿ ರಾಜ್ಯ ಸರಕಾರವನ್ನು ಕೋರಿದೆ.

ಈ ಸಂಬಂಧ 2026ರ ಸೆಪ್ಟೆಂಬರ್ 2ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬರೆದ ಪತ್ರದಲ್ಲಿ, ಆರೋಪಗಳು ಸಾಬೀತಾದರೆ ಅನ್ವಯವಾಗುವ ಸೇವಾ ನಿಯಮಗಳಡಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ, AG ಹಾಗೂ PAG ವಿರುದ್ಧ ಮಾಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಮಹೇಶ್ ಬಾಬು ಅವರು ಸಾರ್ವಜನಿಕವಾಗಿ ಷರತ್ತುರಹಿತ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಆರೋಪಿತ ಹೇಳಿಕೆಗಳು ಪ್ರಕಟವಾದ ಅದೇ ಡಿಜಿಟಲ್ ವೇದಿಕೆಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸಬೇಕೆಂದೂ ಪತ್ರದಲ್ಲಿ ತಿಳಿಸಲಾಗಿದೆ.

ತನಿಖಾ ಸುದ್ದಿಜಾಲತಾಣ ‘ದಿ ಫೈಲ್’ ಪ್ರಕಟಿಸಿದ ವೀಡಿಯೊದಿಂದಾಗಿ ಈ ವಿವಾದ ಭುಗಿಲೆದ್ದಿದೆ. ಗೃಹಲಕ್ಷ್ಮಿ ಯೋಜನೆ ಕುರಿತು ಸಾಮಾಜಿಕ ಕಾರ್ಯಕರ್ತರೊಂದಿಗೆ ನಡೆಸಿದ ಸಂಭಾಷಣೆಯ ವೇಳೆ ಮಹೇಶ್ ಬಾಬು ಅವರು ಇತ್ತೀಚಿನ ಲೆಕ್ಕಪರಿಶೋಧನಾ ವರದಿಯನ್ನು ತಳ್ಳಿಹಾಕಿದ್ದರು. ಅಲ್ಲದೆ, ಎಜಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಹಾಗೂ ‘ಎಜಿಯವರಿಗೆ ಬೂಟಿನಿಂದ ಹೊಡೆಯಬೇಕು’ ಎಂಬರ್ಥದ ಹೇಳಿಕೆ ನೀಡಿರುವುದು ವೀಡಿಯೊದಲ್ಲಿ ದಾಖಲಾಗಿದೆ.

‘ದಿ ಫೈಲ್’ ಬಹಿರಂಗಪಡಿಸಿರುವ ವೀಡಿಯೊದಲ್ಲಿ ಮಹೇಶ್ ಬಾಬು ಅವರು ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನವನ್ನು ಸಮರ್ಥಿಸಿಕೊಂಡಿದ್ದಾರೆ. ಸುಮಾರು 1.30 ಕೋಟಿ ಫಲಾನುಭವಿಗಳಿಗೆ ಹಣ ಹಂಚಿಕೆ ಮಾಡಬೇಕಾದ ಬೃಹತ್ ಪ್ರಮಾಣದ ಕಾರ್ಯದ ಬಗ್ಗೆಯೂ ಅವರು ಗಮನಸೆಳೆದಿದ್ದಾರೆ. ಲೆಕ್ಕಪರಿಶೋಧನಾ ವರದಿಗಳನ್ನು ಸಾರ್ವಜನಿಕರ ಮುಂದೆ ಸರಿಯಾಗಿ ಮಂಡಿಸಿಲ್ಲವೆಂದು ಅವರು ಆಪಾದಿಸಿದ್ದಾರೆ.

ಈ ಕುರಿತು ಮಹಾಲೆಕ್ಕಪರಿಶೋಧಕರ ಕಚೇರಿ ಸ್ಪಷ್ಟೀಕರಣ ನೀಡಿ, ಪ್ರಕಟಿಸಲಾದ ಲೆಕ್ಕಪರಿಶೋಧನಾ ಅಂಕಿಅಂಶಗಳು ಸೀಮಿತ ದತ್ತಾಂಶವನ್ನು ಆಧರಿಸಿದ ಪ್ರಾಥಮಿಕ ಅವಲೋಕನ ಮಾತ್ರವಾಗಿದ್ದು, ಅಂತಿಮ ಲೆಕ್ಕಪರಿಶೋಧನಾ ತೀರ್ಮಾನಗಳಲ್ಲ ಎಂದು ತಿಳಿಸಿದೆ. ಈ ಗೋಪ್ಯ ಪ್ರಾಥಮಿಕ ದತ್ತಾಂಶವನ್ನು ರಾಜ್ಯ ಸರಕಾರವೇ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಿರುವ ಕ್ರಮವನ್ನೂ ಪತ್ರದಲ್ಲಿ ಟೀಕಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ಖಾತೆಗಳಿಗೆ 225 ಕೋಟಿ ರೂ. ಪಾವತಿಯಾಗಿರುವುದು ಹಾಗೂ ನಿಷ್ಕ್ರಿಯ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಕುರಿತು ಮಹಾಲೆಕ್ಕಪರಿಶೋಧಕರ ಕಚೇರಿ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯು ಸ್ಪಷ್ಟನೆ ನೀಡುವಂತೆ ಸಿಎಜಿಯನ್ನು ಕೋರಿತ್ತು.

ಇದೇ ಲೆಕ್ಕಪರಿಶೋಧನಾ ವಿವಾದದ ಹೊರತಾಗಿ, ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿರುವುದಕ್ಕೂ ದಾವಣಗೆರೆ ಉಪಚುನಾವಣೆಯೊಂದಿಗೂ ಮಹೇಶ್ ಬಾಬು ಅವರು ನಂಟು ಕಲ್ಪಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಚುನಾವಣೆಗಳು ನಡೆಯದಿದ್ದರೆ ಬಾಕಿ ಇದ್ದ ಸರಕಾರದ ಅನುದಾನ ಫಲಾನುಭವಿಗಳಿಗೆ ಬಿಡುಗಡೆಯಾಗುತ್ತಿರಲಿಲ್ಲ ಎಂಬರ್ಥದ ಹೇಳಿಕೆಯನ್ನೂ ಅವರು ನೀಡಿದ್ದಾರೆ ಎನ್ನಲಾಗಿದೆ.

ಈ ಹೇಳಿಕೆಗಳು ಹಣಕಾಸಿನ ಔಚಿತ್ಯ ಹಾಗೂ ಚುನಾವಣಾ ಅವಧಿಯಲ್ಲಿ ಸರಕಾರದ ಆಡಳಿತದ ತಟಸ್ಥತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಎಜಿ ಕಚೇರಿ ಅಭಿಪ್ರಾಯಪಟ್ಟಿದೆ.

ಅಕೌಂಟೆಂಟ್ ಜನರಲ್ ಜಹಾಂಗೀರ್ ಇನಾಂದಾರ್ ಸಹಿ ಮಾಡಿರುವ ಪತ್ರದಲ್ಲಿ, ಅರ್ಹ ಮಹಿಳೆಯರಿಗೆ ಸಾರ್ವಜನಿಕ ಹಣ ತಲುಪುವುದನ್ನು ಖಾತರಿಪಡಿಸುವುದೇ ಲೆಕ್ಕಪರಿಶೋಧನೆಯ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ. ಲೆಕ್ಕಪರಿಶೋಧನಾ ವರದಿಗಳ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೇ ಹೊರತು, ಲೆಕ್ಕಪರಿಶೋಧನೆ ನಡೆಸಿದ ಅಧಿಕಾರಿಗಳನ್ನು ನಿಂದಿಸುವುದು ಅಥವಾ ಬೆದರಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಿಎಜಿ ಸಂವಿಧಾನದ 148ನೇ ವಿಧಿಯಡಿ ಸ್ಥಾಪಿತವಾದ ಸಂವಿಧಾನಾತ್ಮಕ ಪ್ರಾಧಿಕಾರವಾಗಿದ್ದು, ಅದರ ಅಧಿಕಾರಿಗಳ ವಿರುದ್ಧದ ಇಂತಹ ವೈಯಕ್ತಿಕ ದಾಳಿಗಳು ಸಂಸ್ಥೆಯ ಸ್ವತಂತ್ರ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ, ಮಹೇಶ್ ಬಾಬು ಅವರ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಆರೋಪಗಳು ದೃಢಪಟ್ಟರೆ ಅನ್ವಯವಾಗುವ ಸೇವಾ ನಿಯಮಗಳಡಿ ಶಿಸ್ತುಕ್ರಮ ಕೈಗೊಳ್ಳಬೇಕು. ಜೊತೆಗೆ AG ಹಾಗೂ PAG ವಿರುದ್ಧ ಮಾಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಅವರು ಅದೇ ಡಿಜಿಟಲ್ ವೇದಿಕೆಗಳಲ್ಲಿ ಸಾರ್ವಜನಿಕವಾಗಿ ಷರತ್ತುರಹಿತ ಕ್ಷಮೆಯಾಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಜಿ ಕಚೇರಿ ರಾಜ್ಯ ಸರಕಾರವನ್ನು ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor