ಬಿಟ್ ಕಾಯಿನ್ ಹಗರಣ: ಹ್ಯಾಕರ್ ಶ್ರೀಕಿಗೆ ಜಾಮೀನು
ಹ್ಯಾಕರ್ ಶ್ರೀಕೃಷ್ಣ
ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಹಾಗೂ ವೆಬ್ ಸೈಟ್ ಗಳ ಹ್ಯಾಕಿಂಗ್ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) ಯಿಂದ ಬಂಧಿತರಾಗಿದ್ದ ಹ್ಯಾಕರ್ ಶ್ರೀಕೃಷ್ಣ (ಶ್ರೀಕಿ) ಹಾಗೂ ರಾಬಿನ್ ಖಂಡೇವಾಲಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಇಂದು ನಡೆಸಿತು. ಆರೋಪಿ ಶ್ರೀಕಿ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ವಾದ ಮಾಡಿ ಯಾವುದೇ ಷರತ್ತು ವಿಧಿಸಿದರೂ ಅದಕ್ಕೆ ಬದ್ಧರಾಗುತ್ತೇವೆ. ಜಾರಿ ನಿರ್ದೇಶನಾಲಯದ ದೂರಿನ ಸಂಬಂಧ ಸಕ್ಷಮ ನ್ಯಾಯಾಲಯ ಇನ್ನಷ್ಟೇ ಸಂಜ್ಞೇ ಪರಿಗಣಿಸಬೇಕಿದೆ ಎಂದರು.
ಮತ್ತೊಬ್ಬ ಆರೋಪಿ ರಾಬಿನ್ ಖಂಡೇವಾಲಾ ಪರವಾಗಿ ವಕೀಲ ಬಿಪಿನ್ ಹೆಗಡೆ ವಾದಿಸಿ ರಾಬಿನ್ ನಿಂದ ಯಾವುದೇ ವಸ್ತುಗಳು ಜಪ್ತಿಯಾಗಿಲ್ಲ ಅಲ್ಲದೆ ವಿಚಾರಣೆಗೆ ಸಹಕರಿಸಲಾಗುತ್ತೆ ಎಂದರು.
ಜಾರಿ ನಿರ್ದೇಶನಾಲಯದ ಪರವಾಗಿ ಎಸ್ಪಿಪಿ ಮಧುರಾವ್ ವಾದ ಮಾಡಿ, ಶ್ರೀಕಿಯು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಹಣ ಸಂಗ್ರಹಿಸಿ ಅದನ್ನು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ವೈಭೋಗದ ಜೀವನ ನಡೆಸಿದ್ದಾರೆ. ಹ್ಯಾಕ್ ಮಾಡಿ ಸಂಗ್ರಹಿಸಿದ ಹಣವನ್ನು ಐಷಾರಾಮಿ ಬದುಕಿಗೆ ವೆಚ್ಚ ಮಾಡಿದ್ದಾರೆ. ಅದನ್ನು ಜಪ್ತಿ ಮಾಡಲಾಗಿಲ್ಲ. ಆರು ಮಂದಿಯ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಲಾಗಿದೆ. ವಿದೇಶದ ಎಕ್ಸ್‌ಚೇಂಜ್‌ಗಳಲ್ಲಿ ಹಣವನ್ನು ಇಟ್ಟಿದ್ದಾರೆ. ಇದೊಂದು ದೊಡ್ಡ ಕೃತ್ಯವಾಗಿದೆ. ಹೀಗಾಗಿ ಸಾಕ್ಷಿಗಳ ವಿಚಾರಣೆ ನಡೆಯುವರೆಗೂ ಇಬ್ಬರಿಗೂ ಜಾಮೀನು ನೀಡಬಾರದು ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಕಳೆದ ಐದು ವರ್ಷಗಳಿಂದ ಅವರು ತನಿಖೆಗೆ ಸಹಕರಿಸಿದ್ದಾರಲ್ಲವೇ. ತನಿಖೆಯ ಕೊನೆಯಲ್ಲಿ ಶ್ರೀಕಿ ಮತ್ತು ರಾಬಿನ್ ರನ್ನು ಬಂಧಿಸಿದ್ದೀರಿ. ಹಣ ಎಲ್ಲಿದೆ ಎಂಬುದು ಈಡಿಗೆ ಗೊತ್ತಿದ್ದರೆ ಅವರನ್ನು ಬಂಧನದಲ್ಲಿ ಇಡಬಹುದಾಗಿತ್ತು. ಆದರೆ ನಿಮಗೆ ಹಣ ಎಲ್ಲಿದೆ ಎಂಬುದೇ ಗೊತ್ತಿಲ್ಲ ಎಂದು ತಿಳಿಸಿ ಇಬ್ಬರಿಗೂ ಜಾಮೀನು ಮಂಜೂರು ಮಾಡಿತು.