ಆಧಾರ ರಹಿತ ಸುದ್ದಿಗಳಿಂದ ಗೊಂದಲ; "ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಶುಲ್ಕವಿಲ್ಲ"
ಬೆಂಗಳೂರು : ಸ್ವಾತಂತ್ರ್ಯ ಉದ್ಯಾನವನದ ಆವರಣದಲ್ಲಿ ನಡೆಸುವ ಯಾವುದೆ ಪ್ರತಿಭಟನೆಗಳಿಗೆ ರಾಜ್ಯ ಸರಕಾರ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಯಾವುದೆ ಶುಲ್ಕ ನಿಗದಿಪಡಿಸಲಾಗಿಲ್ಲ. ಆದರೆ, ಈ ಸಂಬಂಧ ಕೆಲವು ಮಾಧ್ಯಮಗಳು ಮಾಡಿದ ಆಧಾರ ರಹಿತ ಸುದ್ದಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಕಾರಣವಾದವು. ಅಲ್ಲದೇ, ಪ್ರಮುಖ ಪ್ರತಿಪಕ್ಷ ಬಿಜೆಪಿ ಆಧಾರ ರಹಿತ ಸುದ್ದಿಯನ್ನು ನಂಬಿಕೊಂಡು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಪೋಸ್ಟ್‌ಗಳನ್ನು ಹಂಚಿಕೊಂಡು ಟೀಕೆಗೆ ಗುರಿಯಾಗಿದೆ.
ಸ್ವಾತಂತ್ರ್ಯ ಉದ್ಯಾನವನದ ಒಂದು ಭಾಗವನ್ನು ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲು ಸರಕಾರ ಮೀಸಲಿಟ್ಟಿದೆ. ಆದರೆ, ವಾಹನಗಳ ನಿಲುಗಡೆಗಾಗಿ ನಿರ್ಮಿಸಿರುವ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡದಲ್ಲಿ ಸಭೆಗಳನ್ನು ಆಯೋಜಿಸಲು ಒಂದು ಲಕ್ಷ ರೂ.ಬಾಡಿಗೆ ನಿಗದಿ ಮಾಡಲಾಗಿದೆ.
ಖಾಸಗಿ ಕಾರ್ಯಕ್ರಮಗಳಿಗೆ ಕಟ್ಟಡ ಬಳಕೆಗೆ ವಿಧಿಸಬಹುದಾದ ಬಾಡಿಗೆಯನ್ನು ಪ್ರತಿಭಟನೆಯ ಶುಲ್ಕವೆಂದು ಕೆಲವು ಮಾಧ್ಯಮಗಳು ಭಾವಿಸಿಕೊಂಡು ಮಾಡಿದ ವರದಿಗಳೆ ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಬಿಜೆಪಿಯು ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸದೆ, ಅಪಪ್ರಚಾರಕ್ಕೆ ಮುಂದಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಹೋರಾಟಗಾರರಲ್ಲಿ ಗೊಂದಲಗಳು ಮೂಡಲು ಕಾರಣವಾಯಿತು.
ಈ ಮೊದಲು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಬಿಜೆಪಿ ಕರ್ನಾಟಕ, "ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲೂ ₹1 ಲಕ್ಷ ಬಾಡಿಗೆ! ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದಲ್ಲಿ ಜನರ ಪ್ರಜಾಸತ್ತಾತ್ಮಕ ಹೋರಾಟದ ಹಕ್ಕಿಗೂ ಬೆಲೆ ಕಟ್ಟುವಂತಾಗಿದೆ. ಜನರ ಧ್ವನಿಯನ್ನು ಹತ್ತಿಕ್ಕುವ ಈ ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಬರೆದುಕೊಂಡಿತ್ತು.
ʼಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA ) ದಿನಕ್ಕೆ 1 ಲಕ್ಷ ಬಾಡಿಗೆ ನಿಗದಿಪಡಿಸಿದ್ದು, ಆದೇಶ ಹೊರಡಿಸಿದೆʼ ಎಂದು ನ್ಯೂಸ್18 ಕನ್ನಡ, ಕನ್ನಡಪ್ರಭ, ನ್ಯೂಸ್‌ಫಸ್ಟ್ ಕನ್ನಡ ಸಹಿತ ಹಲವು ಪ್ರಮುಖ ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು.