ಬೆಂಗಳೂರು : ನಕಲಿ ವಿಲ್‌ಗೆ ಸಾಕ್ಷಿಯಾಗಿ ಸಹಿ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಅದೇ ದಿನ ಅವರನ್ನು ವಶಕ್ಕೆ ಪಡೆದಿದ್ದ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ತನಿಖಾಧಿಕಾರಿ ಹಾಗೂ ಅವರ ಮೇಲಧಿಕಾರಿಗಳಾದ ಉಪ ಪೊಲೀಸ್‌ ಆಯುಕ್ತರು (ಡಿಸಿಪಿ) ಮತ್ತು ಸಹಾಯಕ ಪೊಲೀಸ್‌ ಆಯುಕ್ತರಿಗೆ (ಎಸಿಪಿ) ಒಟ್ಟು 3 ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ, ದಂಡದ ಮೊತ್ತವನ್ನು ಅಧಿಕಾರಿಗಳು ವೈಯಕ್ತಿಕ ಹಣದಿಂದ ಅರ್ಜಿದಾರರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಅಕ್ರಮ ಬಂಧನವನ್ನು ಪ್ರಶ್ನಿಸಿ ಬೆಂಗಳೂರಿನ ಕೆ.ಎನ್‌. ಮೋಹನ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರನ್ನು ಅಕ್ರಮವಾಗಿ ಬಂಧಿಸಿದ ಕಾರಣಕ್ಕೆ ಪೊಲೀಸ್‌ ಅಧಿಕಾರಿಗಳಿಗೆ 3 ಲಕ್ಷ ರೂ. ದಂಡ ವಿಧಿಸುವುದರ ಜತೆಗೆ ಇಲಾಖಾ ತನಿಖೆಗೂ ನಿರ್ದೇಶಿಸಿದೆ.

ಇದೇ ವೇಳೆ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ನ್ಯಾಯಪೀಠ, ಈ 'ಪೊಲೀಸ್‌ ರಾಜ್‌' ವ್ಯವಸ್ಥೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಇದಕ್ಕೆ ಕಠಿಣ ಕ್ರಮದ ಮೂಲಕ ತಡೆಯೊಡ್ಡಬೇಕಾಗುತ್ತದೆ ಎಂದು ಪೊಲೀಸರಿಗೆ ಕಟು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿತು.

ಎಸ್‌ಐ‌ಗೆ ಕೋರ್ಟ್ ತರಾಟೆ:

ಇದಕ್ಕೂ ಮುನ್ನ, ನ್ಯಾಯಾಲಯ ಕಳೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದಂತೆ ಖುದ್ದು ವಿಚಾರಣೆಗೆ ಹಾಜರಾಗಿದ್ದ ವೈಟ್‌ಫೀಲ್ಡ್‌ ಠಾಣೆ ಸಬ್‌‌ಇನ್‌ಸ್ಪೆಕ್ಟರ್‌ ಸುನೀಲ್‌ ಕುಮಾರ್‌ ಅವರನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಅರ್ಜಿದಾರರನ್ನು ಬಂಧಿಸಿದ್ದೇಕೆ? ಬಂಧಿಸಿದ್ದು ಹೇಗೆ? ಆರೋಪಿ ತನಿಖೆಗೆ ಸಹಕರಿಸದೇ ಇದ್ದರೆ ಬಂಧಿಸಬಹುದು. ಆದರೆ, ನೋಟಿಸ್‌ ನೀಡಿದ ದಿನವೇ ಬಂಧಿಸಿದ್ದೇಕೆ? ಮೇಲಧಿಕಾರಿಗಳು ಬಂಧಿಸಲು ಸೂಚಿಸಿದ್ದರೆ? ಯಾರ ಒತ್ತಡಕ್ಕೆ ಮಣಿದು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿತು. ನ್ಯಾಯಪೀಠದ ಯಾವೊಂದು ಪ್ರಶ್ನೆಗೂ ಸುನೀಲ್‌ ಕುಮಾರ್‌ ಉತ್ತರಿಸದೇ ಮೌನವಾಗಿದ್ದರು.

ಅರ್ಜಿದಾರರನ್ನು ಬಂಧಿಸುವ ಮೂಲಕ ಅವರ ಸ್ವಾತಂತ್ರ್ಯ ಕಸಿದಿರುವ ಕುಕೃತ್ಯಕ್ಕೆ ತನಿಖಾಧಿಕಾರಿ ಮಾತ್ರವಲ್ಲ ಇಡೀ ಠಾಣೆ ಸಮಾನವಾಗಿ ಹೊಣೆಯಾಗಿದೆ. ಸಕಾರಣವಿಲ್ಲದೇ ವ್ಯಕ್ತಿಯೊಬ್ಬರನ್ನು ಬಂಧಿಸುತ್ತಿರಬೇಕಾದರೆ ಡಿಸಿಪಿ ಮತ್ತು ಎಸಿಪಿ ಏನು ಮಾಡುತ್ತಿದ್ದರು? ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಪೀಠ, ಈಗ ವಿಧಿಸಲಾಗುವ ದಂಡವನ್ನು ಮೇಲಧಿಕಾರಿಗಳೂ ಪಾವತಿಸಬೇಕು ಎಂದು ಹೇಳಿತು‌.

ಈ ವೇಳೆ, ಉರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಪ್ರಮಾದ ಆಗಿ ಹೋಗಿದೆ. ತನಿಖಾಧಿಕಾರಿ ಯುವಕನಾಗಿದ್ದು, ಒಂದು ಅವಕಾಶ ನೀಡಬೇಕು ಎಂದು ಪರಿಪರಿಯಾಗಿ ಕೇಳಿಕೊಂಡರಾದರೂ ನ್ಯಾಯಪೀಠ ಇದನ್ನು ಪುರಸ್ಕರಿಸಲಿಲ್ಲ.

ಅರ್ಜಿದಾರರ ಪರ ವಕೀಲ ಅಗಂದ್‌ ಕಾಮತ್‌ ಅವರು, ಇದೊಂದು ಸಿವಿಲ್‌ ಪ್ರಕರಣವಾಗಿದ್ದು, ವಿಲ್‌ ತಿರುಚಲಾಗಿದೆ ಎಂದು ವಿಲ್‌ಗೆ ಸಾಕ್ಷಿಯಾಗಿ ಸಹಿ ಹಾಕಿರುವ ಎರಡನೇ ಆರೋಪಿ ಮೋಹನ್‌ ರೆಡ್ಡಿಗೆ ನೋಟಿಸ್‌ ನೀಡಿದ ದಿನವೇ ತರಾತುರಿಯಲ್ಲಿ ಬಂಧಿಸಲಾಗಿದೆ ಎಂದರು.

ಆಗ ನ್ಯಾಯಪೀಠ, ಸಿವಿಲ್‌ ಪ್ರಕರಣಗಳಲ್ಲಿ ಮೂಗು ತೂರಿಸಲು ಪೊಲೀಸರು ಯಾರು? ವಿಲ್‌ ಪ್ರಕರಣಗಳಲ್ಲಿ ಪೊಲೀಸರಿಗೆ ಪಾಲು ಇರುತ್ತದೆಯೇ ಎಂದು ಕಿಡಿಕಾರಿತಲ್ಲದೆ, ಜನರನ್ನು ಬಂಧಿಸುವುದು ಜೋಕ್‌ ಆಗಿದೆಯೇ? ವಿಚಾರಣಾ ನ್ಯಾಯಾಲಯಗಳೂ ಸಹ ವಿವೇಚನೆ ಬಳಸದೇ ಪೊಲೀಸರು ಬಂಧಿತ ಆರೋಪಿತನ್ನು ರಿಮ್ಯಾಂಡ್‌ಗೆ ಕೇಳಿದ ತಕ್ಷಣ ನೀಡುತ್ತಿವೆ. ನೀವೆಲ್ಲ ಏನೆಂದು ತಿಳಿದುಕೊಂಡಿದ್ದೀರಿ? ಆರೋಪಿಯಾದವನು ಕುಖ್ಯಾತ ಕ್ರಿಮಿನಲ್‌ ಆಗಿದ್ದರೂ ಸಹ ಮೊದಲು ನೋಟಿಸ್‌ ನೀಡಿ, ಆತ ತನಿಖೆಗೆ ಸಹಕರಿಸದಿದ್ದಾಗ ಮಾತ್ರ ಬಂಧಿಸಬಹುದೇ ಹೊರತು ಸುಖಾಸುಮ್ಮನೆ ಬಂಧಿಸಲಾಗದು ಎಂದು ಹೇಳಿತು.

ಪ್ರಕರಣವೇನು?

ನಕಲಿ ವಿಲ್‌ ಎನ್ನಲಾದ ದಾಖಲೆಗೆ ಸಾಕ್ಷಿಯಾಗಿ ಸಹಿ ಹಾಕಿದ ಆರೋಪದಲ್ಲಿ ಅರ್ಜಿದಾರರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿಸಲಾಗಿದೆ. ಈ ಪ್ರಕರಣದಲ್ಲಿ ಆಗಸ್ಟ್‌ 25ರಂದು ನೋಟಿಸ್‌ ನೀಡಿದ್ದ ಪೊಲೀಸರು, ಆಗಸ್ಟ್‌ 27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದರು. ಆದರೆ, ನೋಟಿಸ್ ನೀಡಿದ ದಿನವೇ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆಗಸ್ಟ್ 25ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿತ್ತಲ್ಲದೆ, ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತಲ್ಲದೆ, ತನಿಖಾಧಿಕಾರಿಯ ಖುದ್ದು ಹಾಜರಾತಿಗೆ ತಾಕೀತು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor