Tumakur | ದಯಾಮರಣ ಕೋರಿದ್ದ ಮಹಿಳೆ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ
ಶಿರಾ : ಇಬ್ಬರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ನಿವೇಶನ ಹಂಚಿಕೆಗಾಗಿ ವಿಂಗಡಿಸಲಾಗಿದ್ದ ಬಡಾವಣೆಯಲ್ಲಿ ಗುರುವಾರ ಬೆಳಗಿನ ಜಾವ ವರದಿಯಾಗಿದೆ.
ಮೃತರನ್ನು ರಾಬಿಯಾ(32) ಹಾಗೂ ಅವರ ಮಕ್ಕಳಾದ ತಮನ್ನಾ(9) ಮತ್ತು ಸಿಮ್ರಾನ್(4) ಎಂದು ಗುರುತಿಸಲಾಗಿದೆ. ರಾಬಿಯಾ ಅವರು ಈ ಹಿಂದೆ ಅಸ್ಲಂ ಪಾಷಾ ಎಂಬವರನ್ನು ವಿವಾಹವಾಗಿದ್ದು, ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೆ ಶಿರಾ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಆಯುಕ್ತ ರುದ್ರೇಶ್.ಆರ್ ಮತ್ತು ಅಧ್ಯಕ್ಷ ಜೀಶಾನ್ ಮುಹಮ್ಮದ್ ಅವರನ್ನು ರಾಬಿಯಾಗೆ ನಿವೇಶನ ನೀಡಿದ್ದರ ಬಗ್ಗೆ ಪ್ರಶ್ನಿಸಿದ್ದರು.ಅಲ್ಲದೆ, ಅಲ್ಲಿ ಅಕ್ರಮವಾಗಿ ಮನೆ ಕಟ್ಟಲಾಗಿದೆಯೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ(ಕಿಟ್ಟಪ್ಪ) ಹಾಗೂ ಮಾಜಿ ನಗರಸಭಾಧ್ಯಕ್ಷ ಬಿ.ಅಂಜಿನಪ್ಪ ಆರೋಪಿಸಿದ್ದರು ಹಾಗೂ ಅದನ್ನು ನೆಲಸಮ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇದರಿಂದ ನೊಂದ ರಾಬಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಶಿರಾ ನಗರದ ಹೊರವಲಯದ ನಗರಸಭೆಗೆ ಸೇರಿದ ಸರ್ವೇ ನಂ.100ರ ಮನೆಯೊಂದರಲ್ಲಿ ಘಟನೆ ನಡೆದಿದ್ದು, ಮೂವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರಾಬಿಯಾ ತನ್ನ ಸತತ ಹೋರಾಟದಿಂದ ಮನವಿ ಆಲಿಸುವಂತೆ ಪ್ರಯತ್ನ ನಡೆಸಿದ್ದರು. 2025ರಲ್ಲಿ ತುಮಕೂರಿನಲ್ಲಿ ನಡೆದ ಸರಕಾರದ ವಿವಿಧ ಸವಲತ್ತು ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯರ ಬಳಿ ರಾಬಿಯಾ ತನ್ನ ಮನವಿ ಆಲಿಸುವಂತೆ ಹೋರಾಟ ನಡೆಸಿದ್ದರು. ರಾಬಿಯಾ ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ 20/30 ನಿವೇಶನ ಮಂಜೂರು ಮಾಡಿದ್ದರು.
ಸಿಎಂ ಆದೇಶ ನೀಡಿ ಒಂದೂವರೆ ವರ್ಷ ಕಳೆದಿದ್ದರೂ ನಿವೇಶನ ನೀಡದೆ ಅಧಿಕಾರಿಗಳು ಸತಾಯಿಸಿದ್ದರು ಎನ್ನಲಾಗಿದೆ. ಇದರಿಂದ ರೋಸಿಹೋದ ರಾಬಿಯಾ ಅಂದಿನ ಗೃಹಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ಅಸಮಾಧಾನ ಹೊರಹಾಕಿದ್ದರು. ಸಿಎಂ ಆದೇಶ ಮಾಡಿದರೂ ತನಗೆ ನಿವೇಶನ ಕೊಟ್ಟಿಲ್ಲ ಎಂದು ದಯಾಮರಣ ಕೋರಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆಗ ಮಹಿಳೆಯನ್ನು ಕರೆಸಿ ಸಮಸ್ಯೆ ಆಲಿಸಿದ್ದ ಅಂದಿನ ಗೃಹಸಚಿವ ಡಾ.ಜಿ ಪರಮೇಶ್ವರ್ ಶಿರಾ ನಗರದ ಹೊರವಲಯದಲ್ಲಿ ಸರಕಾರದಿಂದ ಒಂದು ನಿವೇಶನ ನೀಡಿದ್ದರು. ಆದರೂ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಸದ್ಯ ಅನುಮಾನ ಹುಟ್ಟುಹಾಕಿದೆ.
ಘಟನೆ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್, ಡಿವೈಎಸ್ಪಿ ಶೇಖರ್ ಹಾಗೂ ಸಿಪಿಐ ಪ್ರವೀಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.