ಸಹಕಾರಿ ಕ್ಷೇತ್ರದಿಂದ ಸಚಿವ ಸಂಪುಟದವರೆಗೆ: ಸತೀಶ್ ಜಾರಕಿಹೊಳಿ ರಾಜಕೀಯ ಪಯಣ
ಸತೀಶ್ ಜಾರಕಿಹೊಳಿ
ಬೆಂಗಳೂರು : ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
1962 ಜೂನ್ 1 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪುತ್ರನಾಗಿ ಜನಿಸಿದ ಸತೀಶ್ ಜಾರಕಿಹೊಳಿ, ವಾಲ್ಮೀಕಿ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಗೋಕಾಕ್‌ನಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣ ಮುಗಿಸಿರುವ ಇವರು ಕೃಷಿ, ಉದ್ಯಮ ಹಾಗೂ ರಾಜಕೀಯ ಮೂರರಲ್ಲೂ ಅಧಿಪತ್ಯ ಸಾಧಿಸಿದ್ದಾರೆ.
1992ರಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬೆಳಗಾವಿ ಡಿಸಿಸಿ ಬ್ಯಾಂಕ್) ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. ಸಹಕಾರಿ ಕ್ಷೇತ್ರದಲ್ಲಿ ಪಡೆದ ಅನುಭವವು ಅವರ ಮುಂದಿನ ರಾಜಕೀಯ ಬೆಳವಣಿಗೆಗೆ ಭದ್ರ ಬುನಾದಿಯಾಯಿತು.
1998ರಲ್ಲಿ ಬೆಳಗಾವಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ನಂತರ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ 1998ರಿಂದ 2008ರವರೆಗೆ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದರು. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸರಕಾರದಲ್ಲಿ ಜವಳಿ ಇಲಾಖೆಯ ರಾಜ್ಯ ಸಚಿವರಾಗಿ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿದರು.
2008ರಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರ ರಚನೆಯಾದ ನಂತರ ಸತತವಾಗಿ 2008, 2013, 2018 ಹಾಗೂ 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿ ಕ್ಷೇತ್ರದಲ್ಲಿ ಅಜೇಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಪ್ರಮುಖ ಸಚಿವ ಸ್ಥಾನಗಳು :
ಜವಳಿ ಇಲಾಖೆ ರಾಜ್ಯ ಸಚಿವರು (2004–2005)
ಅಬಕಾರಿ ಸಚಿವರು (2013–2016)
ಅರಣ್ಯ, ಪರಿಸರ ಮತ್ತು ಜೀವಪರಿಸ್ಥಿತಿ ಸಚಿವರು (2018–2019)
ಲೋಕೋಪಯೋಗಿ ಇಲಾಖೆ (PWಆ) ಸಚಿವರು (2023ರಿಂದ)
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು (2023ರಿಂದ)
2020ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು ರಾಜ್ಯ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ರಾಜಕಾರಣಿಯಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಪ್ರಮುಖ ಸಕ್ಕರೆ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಗೋಕಾಕ್ ಭಾಗದಲ್ಲಿ ಸ್ಥಾಪಿತವಾಗಿರುವ ಸತೀಶ್ ಶುಗರ್ಸ್ ಲಿಮಿಟೆಡ್ ಉತ್ತರ ಕರ್ನಾಟಕದ ಪ್ರಮುಖ ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದೆ.
ಅಹಿಂದ ಮತ್ತು ವಾಲ್ಮೀಕಿ ನಾಯಕತ್ವ :
ಸತೀಶ್ ಜಾರಕಿಹೊಳಿ ಅವರು ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಸಿದ್ದರಾಮಯ್ಯ ಅವರ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ರಾಜಕಾರಣದಲ್ಲಿ ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರಾಗಿದ್ದಾರೆ.