Photo credit: AAIB

 ಬೆಂಗಳೂರು: ಕಲಬುರಗಿಯಲ್ಲಿ ಮಂಗಳವಾರ ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ಲಘು ತರಬೇತಿ ವಿಮಾನ ತಾಂತ್ರಿಕ ದೋಷದಿಂದ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೇ ಸಂಸ್ಥೆಗೆ ಸೇರಿದ ಲಘು ತರಬೇತಿ ವಿಮಾನವೊಂದು 2026ರ ಫೆಬ್ರವರಿ 8ರಂದು ವಿಜಯಪುರ ಜಿಲ್ಲೆಯ ಮಂಗಳೂರ ಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ಆ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನೀಡಿರುವ ಪ್ರಾಥಮಿಕ ವರದಿಯಲ್ಲಿ ಹಾರಾಟಕ್ಕೂ ಮುನ್ನ ವಿಮಾನದಲ್ಲಿದ್ದ ಇಂಧನದ ಪ್ರಮಾಣ ಹಾಗೂ ವಾಸ್ತವವಾಗಿ ತುಂಬಿಸಲಾದ ಇಂಧನದ ಪ್ರಮಾಣವನ್ನು ಪರಿಶೀಲಿಸಿ ದಾಖಲಿಸಿರಲಿಲ್ಲ ಎಂದು ಬಹಿರಂಗವಾಗಿದೆ.

 ಫೆಬ್ರವರಿ 8ರಂದು ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿ ಪ್ರೈವೇಟ್ ಲಿಮಿಟೆಡ್ ನ ಸೆಸ್ನಾ 172 (VT-EUC) ವಿಮಾನವು ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕ್ರಾಸ್-ಕಂಟ್ರಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ವಿಜಯಪುರ ಜಿಲ್ಲೆಯ ಮಂಗಳೂರ ಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಬೋಧಕರಿಗೆ ಗಂಭೀರ ಗಾಯಗಳಾಗಿದ್ದರೆ, ವಿದ್ಯಾರ್ಥಿ ಪೈಲಟ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ವಿಮಾನದ ಹಾರಾಟಕ್ಕಾಗಿ ಫ್ಲೈಟ್ ಆಥರೈಸೇಶನ್ ಬುಕ್ ನಲ್ಲಿ ಕಲಬುರಗಿ–ಬೆಳಗಾವಿ ಮಾರ್ಗದ ವಿವರಗಳನ್ನು ದಾಖಲಿಸಲಾಗಿತ್ತು. ಆದರೆ ಟೆಕ್ನಿಕಲ್ ಲಾಗ್ ನಲ್ಲಿ ‘ಹಾರಾಟಕ್ಕೂ ಮುನ್ನವಿದ್ದ ಇಂಧನ’ (Fuel Before Flight) ಮತ್ತು ‘ವಾಸ್ತವವಾಗಿ ತುಂಬಿದ ಇಂಧನ’ (Actual Fuel Uplift) ಕುರಿತ ನಮೂದುಗಳನ್ನು ಮಾಡಿರಲಿಲ್ಲ. ಹೊರಡುವ ಮುನ್ನ ಸಿಬ್ಬಂದಿಯೂ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರಲಿಲ್ಲ. ಟೆಕ್ನಿಕಲ್ ಲಾಗ್ ನಲ್ಲಿ ಕೇವಲ ‘ಒಟ್ಟು ಇಂಧನ’200 ಲೀಟರ್ ಎಂದು ನಮೂದಿಸಲಾಗಿತ್ತು ಎಂದು AAIB ವರದಿ ತಿಳಿಸಿದೆ.

ಫೆಬ್ರವರಿ 8ರಂದು ಬೆಳಗ್ಗೆ 7:30ಕ್ಕೆ ವಿಮಾನ ಕಲಬುರಗಿ ವಿಮಾನ ನಿಲ್ದಾಣದಿಂದ ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ಲಘು ವಿಮಾನ ಹೊರಟಿತು. ಬೆಳಗಾವಿಯತ್ತ ಹಾರುತ್ತಿದ್ದಾಗ ಸುಮಾರು 66 ನಾಟಿಕಲ್ ಮೈಲು ದೂರದಲ್ಲಿದ್ದಾಗ ಲಘು ವಿಮಾನದ ಇಂಜಿನ್ ಶಕ್ತಿ ಕಡಿಮೆಯಾಯಿತು. ಆ ಬಳಿಕ ಸಿಬ್ಬಂದಿ ಹತ್ತಿರದ ATC ಘಟಕಗಳು ಹಾಗೂ ಕಂಪೆನಿಯ ಇತರ ವಿಮಾನಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ.

ಬಳಿಕ ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ವಿಮಾನ ಇಳಿಸಲು ನಿರ್ಧರಿಸಿದರು. ಮಂಗಳೂರ ಗ್ರಾಮದ ಬಳಿಯ ಕೃಷಿ ಜಮೀನೊಂದನ್ನು ಆಯ್ಕೆ ಮಾಡಿದರು. ಕಬ್ಬು ಕಟಾವು ಮುಗಿದಿದ್ದ ಆ ಜಮೀನಿನಲ್ಲಿ ಒಣಗಿದ ಕಬ್ಬಿನ ಎಲೆಗಳು ಹರಡಿದ್ದವು. ವಿಮಾನ ಮೊದಲು ಮುಖ್ಯ ಲ್ಯಾಂಡಿಂಗ್ ಗೇರ್ ಮೂಲಕ ನೆಲವನ್ನು ಸ್ಪರ್ಶಿಸಿತು. ಬಳಿಕ ವಿಮಾನ ಮುಂದಕ್ಕೆ ಚಲಿಸಿ ಉರುಳಿಬಿದ್ದು, ರೆಕ್ಕೆಗಳು ಹಾಗೂ ಹಿಂಭಾಗದ ಲಂಬ ರೆಕ್ಕೆಯ ಮೇಲೆ ತಲೆಕೆಳಗಾಗಿ ನಿಂತಿತು AAIB ವರದಿ ಹೇಳಿದೆ.

ವಿಮಾನದ ಅವಶೇಷಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಅಪಘಾತದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನ ವಿಶ್ಲೇಷಣೆಗಾಗಿ ವಿಮಾನದ ತೈಲದ ಮಾದರಿಯನ್ನು ಸಂಗ್ರಹಿಸಲು ಪರೀಕ್ಷಿಸಿದ ಸಂದರ್ಭದಲ್ಲಿ ವಿಮಾನದಲ್ಲಿ ಯಾವುದೇ ಇಂಧನ ಲಭ್ಯವಿರಲಿಲ್ಲ ಎಂದು AAIB ವರದಿ ದಾಖಲಿಸಿದೆ.

ಅಪಘಾತದ ತನಿಖೆಗಾಗಿ VT-EUCಗೆ ಸಂಬಂಧಿಸಿದ ಲಾಗ್ ಬುಕ್ ಗಳು, ನಿರ್ವಹಣಾ ದಾಖಲೆಗಳು, ಇಂಧನ ರಿಜಿಸ್ಟರ್ ಹಾಗೂ ವಿಮಾನದಲ್ಲಿನ ಇತರ ದಾಖಲೆಗಳನ್ನು ನಿರ್ವಾಹಕರಿಂದ ಸಂಗ್ರಹಿಸಲಾಗಿದೆ. ಅಪಘಾತದ ದಿನ ಕಲಬುರಗಿ ವಿಮಾನ ನಿಲ್ದಾಣದ ವಿಮಾನ ನಿಲುಗಡೆ ಪ್ರದೇಶದ CCTV ದೃಶ್ಯಾವಳಿಗಳನ್ನೂ ಪಡೆಯಲಾಗಿದೆ.

►ಹಾರಾಟಕ್ಕೆ ಎರಡು ದಿನ ಮೊದಲು ಇಂಧನ ತುಂಬಲಾಗಿತ್ತು!

ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ವಿಮಾನವು ಮೂಲತಃ ಆಪರೇಟರ್ ನ ಮಧ್ಯಪ್ರದೇಶದ ಸಿಯೋನಿ ನೆಲೆಯಲ್ಲಿ ಇತ್ತು. 2025ರ ಡಿಸೆಂಬರ್ 18ರವರೆಗೆ ಅಲ್ಲಿಯೇ ತರಬೇತಿ ಹಾರಾಟಗಳನ್ನು ನಡೆಸಲಾಗಿತ್ತು.

2026ರ ಫೆಬ್ರವರಿ 6ರಂದು 180 ಲೀಟರ್ ಇಂಧನದೊಂದಿಗೆ ಸಿಯೋನಿಯಿಂದ ಕಲಬುರಗಿಗೆ ವಿಮಾನವನ್ನು ತರಲಾಗಿತ್ತು. ಈ ಹಾರಾಟದ ಬ್ಲಾಕ್ ಸಮಯ 4 ಗಂಟೆ 40 ನಿಮಿಷವಾಗಿತ್ತು.

ಫೆಬ್ರವರಿ 7ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನದ ಇಂಡಕ್ಷನ್ ಏರ್ ಫಿಲ್ಟರ್ ಬದಲಾಯಿಸಲಾಯಿತು. ಇದೇ ವೇಳೆ 600 ಗಂಟೆ/12 ತಿಂಗಳ ಅವಧಿಯ ಆಪರೇಷನ್ 27 ತಪಾಸಣೆ ನಡೆಸಲಾಯಿತು. ನಿರ್ವಹಣಾ ಕೆಲಸ ಪೂರ್ಣಗೊಂಡ ಬಳಿಕ ಅದರ ಪ್ರಮಾಣಪತ್ರ (CRS) ನೀಡಲಾಗಿತ್ತು.

ಅಪಘಾತವಾದ ದಿನದ ಹಾರಾಟವು ಫೆಬ್ರುವರಿ 7ರಂದು ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ವಿಮಾನದ ಮೊದಲ ತರಬೇತಿ ಹಾರಾಟವಾಗಿತ್ತು

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಘಾತದ ದಿನ NOTAM C0004/26 ಪ್ರಕಾರ ATC ಕಾರ್ಯನಿರ್ವಹಿಸುತ್ತಿರಲಿಲ್ಲ. ಬೆಳಗ್ಗೆ 7ರಿಂದ 9 ಗಂಟೆಯ ನಡುವೆ ದೃಶ್ಯ ಗೋಚರತೆ 7,000 ಮೀಟರ್ ಇತ್ತು. ಗಾಳಿಯ ವೇಗ 5ರಿಂದ 7 ನಾಟ್ ಗಳಷ್ಟಿತ್ತು ಎಂದು ಭಾರತ ಸರಕಾರದ ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB — Aircraft Accident Investigation Bureau) ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

Photo credit: AAIB

 

Photo credit: AAIB

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು

contributor