ಚಿಕ್ಕಮಗಳೂರು, ಅ.7: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ SIR-2026ರ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ 243 ಫಾರಂ-7 ಆಕ್ಷೇಪಗಳ ಕುರಿತು ನಿಷ್ಪಕ್ಷ ತನಿಖೆ ನಡೆಸಿ ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸಬೇಕೆಂದು ಸಂಯುಕ್ತ ಮುಸ್ಲಿಮ್ ಜಮಾಅತ್ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಎದುರು ನೂರಾರು ಸಂತ್ರಸ್ತ ಮತದಾರರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ಮುಖಂಡರು ಕೊಪ್ಪ ತಾಲೂಕಿನಲ್ಲಿ SIR-2026 ಪ್ರಕ್ರಿಯೆ ಸಂದರ್ಭದಲ್ಲಿ, ಒಟ್ಟು 243 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಫಾರಂ-7 ಮೂಲಕ ಆಕ್ಷೇಪಗಳು ಸಲ್ಲಿಕೆಯಾಗಿವೆ. ಇದರಲ್ಲಿ 218 ಮುಸ್ಲಿಮ್ ಹಾಗೂ 25 ಕ್ರಿಶ್ಚಿಯನ್ ಮತದಾರರು ಒಳಗೊಂಡಿದ್ದಾರೆ.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿರ್ದಿಷ್ಟ ಮತದಾರರ ವಿರುದ್ಧ ಒಂದೇ ರೀತಿಯ ಕಾರಣಗಳನ್ನು ಆಧರಿಸಿ ಆಕ್ಷೇಪಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ಸಾಮಾನ್ಯ ಅರ್ಜಿ ಎಂದು ಪರಿಗಣಿಸದೆ ಸಂಪೂರ್ಣವಾಗಿ ಪರಿಶೀಲಿಸುವುದು ಚುನಾವಣಾ ಆಡಳಿತದ ಕರ್ತವ್ಯವಾಗಿದೆ ಎಂದರು

ಯಾವುದೇ ಅರ್ಹ ಮತದಾರನ ಹೆಸರನ್ನು ಕೇವಲ ಫಾರಂ-7 ಸಲ್ಲಿಕೆಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು, ಪ್ರತಿಯೊಬ್ಬ ಮತದಾರನಿಗೆ ನೋಟಿಸ್ ನೀಡಿ, ತನ್ನ ವಾಸಸ್ಥಳ ಮತ್ತು ಮತದಾರರ ಅರ್ಹತೆಯನ್ನು ಸಮರ್ಥಿಸಿಕೊಳ್ಳಲು ಸಮರ್ಪಕ ಅವಕಾಶ ನೀಡಬೇಕು ಎಂದ ಮುಖಂಡರು, ಈ 243 ಪ್ರಕರಣಗಳು ಕೇವಲ ಕೆಲವು ವ್ಯಕ್ತಿಗಳ ವೈಯಕ್ತಿಕ ಅರ್ಜಿಗಳ ವಿಷಯವಲ್ಲ ಅರ್ಹ ನಾಗರಿಕರ ಮತದಾನರ ಹಕ್ಕಿನೊಂದಿಗೆ ನೇರವಾಗಿ ಸಂಬಂಧಿಸಿದ ಅತ್ಯಂತ ಗಂಭೀರ ಚುನಾವಣಾ ವಿಷಯವಾಗಿದೆ. ಆದ್ದರಿಂದ ಯಾವುದೇ ಒತ್ತಡ, ರಾಜಕೀಯ ಪ್ರಭಾವ ಅಥವಾ ಪೂರ್ವನಿರ್ಧಾರಕ್ಕೆ ಅವಕಾಶ ನೀಡದೆ, ಪ್ರತೀ ಫಾರಂ-7 ಅರ್ಜಿಯ ಸತ್ಯಾಸತ್ಯತೆಯನ್ನು ದಾಖಲೆ ಮತ್ತು ಸ್ಥಳ ಪರಿಶೀಲನೆಯ ಆಧಾರದ ಮೇಲೆ ಮಾತ್ರ ನಿರ್ಧರಿಸಬೇಕು ಎಂದರು.

ಸುಳ್ಳು ಮಾಹಿತಿ ನೀಡಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಯಾರಾದರೂ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿರುವುದು ಕಂಡುಬಂದರೆ, ಅಂತಹವರ ವಿರುದ್ಧ Section 31 ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಫಾರಂ-7ನಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ಅಥವಾ ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಕಂಡು ಬಂದಲ್ಲಿ Representation of the People Act, 19500 Section 3102 ಕೈಗೊಳ್ಳಬೇಕು.

ಯಾವುದೇ ಅರ್ಹ ಮತದಾರನ ಹೆಸರು ತಪ್ಪಾಗಿ ತೆಗೆದುಹಾಕದಂತೆ ಚುನಾವಣಾ ಇಲಾಖೆ ಅತ್ಯಂತ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದರು.

ಆದ್ದರಿಂದ ಮೇಲ್ಕಂಡ ಬೇಡಿಕೆಗಳಂತೆ 243 ಫಾರಂ-7 ಪ್ರಕರಣಗಳ ಸಂಪೂರ್ಣ, ನಿಷ್ಪಕ್ಷ ಮತ್ತು ಪಾರದರ್ಶಕ ಪರಿಶೀಲನೆ ನಡೆಸಿ, ಅರ್ಹ ಮತದಾರರ ಹೆಸರುಗಳನ್ನು ರಕ್ಷಿಸಿ, ಸುಳ್ಳು ಆಕ್ಷೇಪಗಳು ಕಂಡುಬಂದಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ತಾಲೂಕು ಕಚೇರಿ ಶಿರಸ್ತೇದಾರ್ ಮೂಲಕ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

233 ಸಂತ್ರಸ್ತರು ವೈಯಕ್ತಿಕವಾಗಿ ಆಕ್ಷೇಪ ಅರ್ಜಿ ಅಲ್ಲಿಸಿದರು.

ಜಮಾಅತ್ ಅಧ್ಯಕ್ಷ ಶಫಿ ಅಹ್ಮದ್, ಕಾರ್ಯದಶಿ ಇಸ್ಮಾಯೀಲ್ ಜಯಪುರ, ಖಜಾಂಚಿ ಕಮಾಲಿಯಾ, ಸಹ ಕಾರ್ಯದಶಿ ಬರ್ಕತ್ ಅಲಿ, ಸದಸ್ಯರಾದ ನೌಶಾದ್, ಇಸ್ಮಾಯೀಲ್ ಬಿ.ಆರ್.ಎಂ., ಜಹೂರ್ ಹುಸೇನ್, ಮುಹಮ್ಮದ್ ಸಾದಿಕ್ ಅಬ್ದುಲ್ ಹಮೀದ್, ನಾರ್ವೆ ಶರೀಫ್, ಮನ್ಸೂರ್ ಎಚ್.ಎಚ್.ಪಿ., ಇರ್ಫಾನ್, ಶರೀಫ್ ಕುದುರೆಗುಂಡಿ, ಆಸಿಫ್ ಎಚ್.ಎಚ್.ಪಿ., ಅಬ್ದುಲ್ ಹಕ್, ಆದಿಲ್ ಸಾಬ್ವ ಕೊಪ್ಪ, ಹಫೀಝ್ ಕೊಪ್ಪ, ಇಸ್ಮಾಯೀಲ್ ಸುಲ್ತಾನ್, ಮುಹಮ್ಮದ್ ಜೋಗಿಸರ, ಶಬ್ಬೀರ್ ಅಹ್ಮದ್, ಮುಹಮ್ಮದ್ ಬದ್ರಿಯಾ ಅಬ್ದುಲ್ ಹಮೀದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor