ಬೆಂಗಳೂರು : ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೊಮ್ಮೆ ಹೆಚ್ಚಿನ ಜಿಡಿಪಿ ಬೆಳವಣಿಗೆಯಾಗಿದೆ ಎಂದು ಸುಳ್ಳು ಅಂಕಿ-ಅಂಶವನ್ನು ತೋರಿಸಿ ಸಂಭ್ರಮಿಸುತ್ತಿದೆ. ಇದನ್ನೇ ದೇಶದ ಪ್ರತಿ ನಾಗರಿಕರ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಆರ್ಥಿಕತೆಯು ಇಷ್ಟು ವೇಗವಾಗಿ ಬೆಳೆಯುತ್ತಿದ್ದರೆ ಉತ್ತಮ ಉದ್ಯೋಗಾವಕಾಶಗಳು ಏಕೆ ಸೃಷ್ಟಿಯಾಗುತ್ತಿಲ್ಲ? ಜನರ ಆದಾಯ ಏಕೆ ಹೆಚ್ಚುತ್ತಿಲ್ಲ? ಬಹುತೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ಇನ್ನೂ ಏಕೆ ದೊರೆಯುತ್ತಿಲ್ಲ? ಎಂಬ ಪ್ರಶ್ನೆಗಳನ್ನು ದೇಶದ ಜನರು ಕೇಳುತ್ತಿದ್ದಾರೆ. ಜನರ ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಇತ್ತೀಚೆಗೆ ಜಿಡಿಪಿಯ ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಜಿಡಿಪಿ ಲೆಕ್ಕಾಚಾರದ ವಿಧಾನ, ಅಂಕಿಅಂಶಗಳ ಮೂಲಗಳು ಮತ್ತು ಅಂದಾಜು ಪ್ರಕ್ರಿಯೆಗಳಲ್ಲೂ ಜನರಿಗೆ ವಂಚಿಸುವ ಉದ್ದೇಶದಿಂದ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಕೋವಿಡ್-19 ಮಹಾಮಾರಿಯಿಂದ ಉಂಟಾದ ಆರ್ಥಿಕ ಕುಸಿತದ ವರ್ಷವನ್ನು ಮೂಲ ವರ್ಷವೆಂದು ಪರಿಗಣಿಸಿ ಜಗತ್ತಿನ ಅರ್ಥಶಾಸ್ತ್ರಜ್ಞರ ಮುಂದೆ ಹಾಸ್ಯಾಸ್ಪದ ಪ್ರವೃತ್ತಿಯನ್ನು ತೋರಿಸಿದ್ದಾರೆ. ಕೇವಲ ಹೆಚ್ಚಿನ ಬೆಳವಣಿಗೆ ದರಗಳ ಬಗ್ಗೆ ಮಾತ್ರ ಪ್ರಚಾರ ಮಾಡಲಾಗುತ್ತಿದೆ. ಒಂದು ಆರ್ಥಿಕತೆ ಒಂದು ವರ್ಷದಲ್ಲಿ ತೀವ್ರವಾಗಿ ಕುಸಿದರೆ, ಮುಂದಿನ ವರ್ಷ ಆ ಕುಸಿದ ಮಟ್ಟದಿಂದ ಆಗುವ ಬೆಳವಣಿಗೆ ಸಹಜವಾಗಿಯೆ ದೊಡ್ಡ ಶೇಕಡಾವಾರು ಬೆಳವಣಿಗೆಯಂತೆ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆದುದರಿಂದ, ಜನರಿಗೆ ಆರ್ಥಿಕತೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಷ್ಟೇ ಅಲ್ಲ, ಆ ಬೆಳವಣಿಗೆಯಲ್ಲಿ ನಿಜವಾದ ಆರ್ಥಿಕ ಚಟುವಟಿಕೆಯ ಪ್ರಮಾಣ ಎಷ್ಟಿದೆ ಮತ್ತು ಅಂಕಿಅಂಶಗಳ ಪರಿಣಾಮ ಎಷ್ಟಿದೆ ಎಂಬುದನ್ನೂ ತಿಳಿದುಕೊಳ್ಳುವ ಹಕ್ಕಿದೆ. ಇಂತಹ ಬದಲಾವಣೆಗಳು ದೇಶದ ಆರ್ಥಿಕತೆಯ ಗಾತ್ರ ಮತ್ತು ಬೆಳವಣಿಗೆಯ ದಿಕ್ಕನ್ನೇ ಬದಲಾಯಿಸುವ ಸಂದರ್ಭದಲ್ಲಿ, ಸಂಪೂರ್ಣ ಪಾರದರ್ಶಕತೆ ಮತ್ತು ಸ್ವತಂತ್ರ ಪರಿಶೀಲನೆಗೆ ಆಗ್ರಹಿಸುವ ಹಕ್ಕು ಜನರಿಗೆ ಖಂಡಿತವಾಗಿಯೂ ಇದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಜಿಡಿಪಿ ಅಂಕಿ-ಅಂಶವು ಸಮೃದ್ಧಿಯ ಪ್ರಮಾಣಪತ್ರವಲ್ಲ. ಕಾರಣ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದೆಂದು ಹೇಳಿಕೊಳ್ಳುವ ಭಾರತದ ತಲಾ ಆದಾಯ ಜಗತ್ತಿನ ಬಡರಾಷ್ಟ್ರಗಳಿಗೆ ಸಮಾನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಐಎಂಎಫ್ ಅಂದಾಜಿನ ಪ್ರಕಾರ, 2026ರಲ್ಲಿ ಭಾರತದ ತಲಾವಾರು ಜಿಡಿಪಿ ಸುಮಾರು 2,813 ಅಮೆರಿಕನ್ ಡಾಲರ್ ಮಾತ್ರವಾಗಿದ್ದು, ತಲಾ ಆದಾಯದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸುಮಾರು 150ನೇ ಸ್ಥಾನದಲ್ಲಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಭಾರತವು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ. ಬಾಂಗ್ಲಾದೇಶದ ತಲಾವಾರು ಜಿಡಿಪಿ ಸುಮಾರು 2,911 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಭಾರತದ ತಲಾ ಆದಾಯ ಈಗ ಅಂದಾಜು ಮಾಡಿರುವುದಕ್ಕಿಂತಲೂ ಕಡಿಮೆಯಿದೆ. ಉತ್ತಮ ಗುಣಮಟ್ಟದ ಉದ್ಯೋಗಗಳು ದೇಶದ ಕಾರ್ಮಿಕ ವಲಯದ ಕೇವಲ ಸಣ್ಣ ವರ್ಗಕ್ಕಷ್ಟೇ ತಲುಪುತ್ತಿವೆ ಎಂದು ಐಎಂಎಫ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಕೇಂದ್ರ ಸರಕಾರವು, ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದ ಯುವಜನರಿಗೆ ಶೇ.7-8ರಷ್ಟು ಜಿಡಿಪಿ ಬೆಳವಣಿಗೆಯಿಂದ ಏನು ಪ್ರಯೋಜನ? ಕೊಳ್ಳುವ ಸಾಮಥ್ರ್ಯ ಕುಸಿಯುತ್ತಿರುವ ಕುಟುಂಬಕ್ಕೆ ಇದರಿಂದ ಯಾವ ಉಪಯೋಗ? ಕಡಿಮೆ ಸಂಬಳ ಅಥವಾ ಉದ್ಯೋಗ ಭದ್ರತೆಯಿಲ್ಲದ ಕಾರ್ಮಿಕರಿಗೆ ಈ ಅಂಕಿ-ಅಂಶಗಳಿಂದ ಯಾವ ಲಾಭ? ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಜಿಡಿಪಿ ಅಂಕಿ-ಅಂಶಗಳಾಚೆಗೆ ಹೋಗಿ ಭಾರತದ ಬಾಹ್ಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ಸರಕು ವ್ಯಾಪಾರ ಕೊರತೆ ವೇಗವಾಗಿ ಹೆಚ್ಚುತ್ತಿದೆ. 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ 4.2 ಬಿಲಿಯನ್ ಡಾಲರ್‍ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸರಕು ವ್ಯಾಪಾರ ಕೊರತೆ 86.1 ಬಿಲಿಯನ್ ಡಾಲರ್‍ಗೆ ತಲುಪಿದೆ. 2025-26ರ ಇಡೀ ಹಣಕಾಸು ವರ್ಷದಲ್ಲಿ ಈ ಕೊರತೆ 333.19 ಬಿಲಿಯನ್ ಡಾಲರ್ ಆಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತದ ವಿದೇಶಿ ವಿನಿಮಯ ಮೀಸಲುಗಳು 2026ರ ಎಪ್ರಿಲ್-ಜೂನ್ ಅವಧಿಯಲ್ಲಿ 8.1 ಬಿಲಿಯನ್ ಡಾಲರ್ ಕುಸಿದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.5 ಬಿಲಿಯನ್ ಡಾಲರ್ ಹೆಚ್ಚಳವಾಗಿತ್ತು. ಈ ಬದಲಾವಣೆಯು ಭಾರತದ ಬಾಹ್ಯ ಆರ್ಥಿಕ ದೌರ್ಬಲ್ಯದ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪರಮೇಶ್ವರ್ ಪ್ರತಿಪಾದಿಸಿದ್ದಾರೆ.

ದೇಶಕ್ಕೆ ಕೇವಲ ಹೆಚ್ಚಿನ ಜಿಡಿಪಿ ಅಂಕಿ-ಅಂಶ ಬೇಕಿಲ್ಲ. ಹೆಚ್ಚು ಆದಾಯ, ಉತ್ತಮ ಉದ್ಯೋಗಾವಕಾಶ, ಬಲಿಷ್ಠ ರಫ್ತು ವ್ಯವಸ್ಥೆ, ಸ್ಪರ್ಧಾತ್ಮಕ ಉತ್ಪಾದನೆ ಮತ್ತು ಆರ್ಥಿಕ ಭದ್ರತೆಯೂ ಬೇಕಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಾವು ನಮ್ಮ ಜನರ ಭವಿಷ್ಯವನ್ನು ಸುರಕ್ಷಿತಗೊಳಿಸುವಷ್ಟು ವೇಗವಾಗಿ, ಎಲ್ಲರನ್ನೂ ಒಳಗೊಂಡಂತೆ, ಸುಸ್ಥಿರವಾಗಿ ಪ್ರಗತಿ ಸಾಧಿಸುತ್ತಿದ್ದೇವೆಯೇ ಎಂಬುದೇ ನಿಜವಾದ ಪ್ರಶ್ನೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಉತ್ತರ ಜಿಡಿಪಿ ಹೆಡ್‍ಲೈನ್‍ನಲ್ಲಿ ಸಿಗುವುದಿಲ್ಲ. ಸಾಮಾನ್ಯ ನಾಗರಿಕನ ಬದುಕಿನಲ್ಲಿ ಕಾಣಿಸಬೇಕು. ಭಾರತದ ಆರ್ಥಿಕತೆಯನ್ನು ಅಂಕಿಅಂಶಗಳ ರಾಜಕೀಯದಿಂದ ಹೊರತೆಗೆದು, ಜನಕೇಂದ್ರಿತ ಆರ್ಥಿಕ ವ್ಯವಸ್ಥೆಯತ್ತ ಕೊಂಡೊಯ್ಯಬೇಕಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor