Hanur | ಸೂಳೇರಿಪಾಳ್ಯದಲ್ಲಿ ಬಲವಂತದ ದುಡಿತ ಪ್ರಕರಣ; ಆರು ಮಂದಿ ವಿರುದ್ಧ ಎಫ್ಐಆರ್ ದಾಖಲು
ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಸೂಳೇರಿಪಾಳ್ಯ ಸಮೀಪದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ನಿರ್ಗತಿಕರಿಂದ ದುಡಿತ ಮಾಡಿಸಿಕೊಂಡು ಕೂಲಿ ಹಾಗೂ ಆಹಾರವನ್ನು ಸರಿಯಾಗಿ ನೀಡದೇ ಹಿಂಸೆ ನೀಡಿದ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆದ್ದುಕೊಂಡ ಕಂದಾಯ ಇಲಾಖೆಯ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರು ಮಂದಿ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಳೇರಿಪಾಳ್ಯ ಸಮೀಪದ ಕಬ್ಬಿನಗದ್ದೆಯಲ್ಲಿ ಷಣ್ಮುಗ ಎಂಬ ವ್ಯಕ್ತಿಯ ಮೂಲಕ ತಮಿಳುನಾಡು, ಬಿಹಾರ ಮತ್ತು ಆಂದ್ರ ಪ್ರದೇಶದ ಸುಮಾರು 32 ಮಂದಿ ನಿರ್ಗತಿಕರನ್ನು ಕರೆ ತಂದು ಕೂಲಿ ಕೆಲಸಕ್ಕೆ ಸೇರಿಸಿದ್ದರು. ಆದರೆ ಕೂಲಿ ಮತ್ತು ಆಹಾರ ನೀಡದೇ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, 32 ಮಂದಿಯನ್ನು ರಕ್ಷಿಸಿದ್ದರು. ಈ ಬಗ್ಗೆ ರಾಜಸ್ವ ನಿರೀಕ್ಷಕ ಶಿವಕುಮಾರ್ ಅವರು ರಾಮಾಪುರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಆರು ಮಂದಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಪ್ರಮುಖ ಆರೋಪಿಯಾಗಿ ಷಣ್ಮುಗ, ತಮಿಳುನಾಡಿನ ರೂಬಿ, ರಂಜಿತಾ, ಸರವಣ್ಣ, ಕಾರ್ತಿಕ್, ಹಾಗೂ ಮತ್ತೊಬ್ಬರು ಚಾಮರಾಜನಗರ ನಿವಾಸಿ ಎಂದು ಎಫ್ ಐ ಆರ್ ನಲ್ಲಿ ತಿಳಿಸಲಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಈ ನಡುವೆ ಅಕ್ರಮ ಬಂಧನದಲ್ಲಿಕೊಂಡು ದುಡಿಸಿಕೊಳ್ಳುತ್ತಿದ್ದವರನ್ನು ಬಂಧ ಮುಕ್ತರನ್ನಾಗಿಸಿ, ಅವರ ತವರೂರುಗಳಿಗೆ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ.