ಬೆಂಗಳೂರು : ಕೆ.ಆರ್.ಐ.ಡಿ.ಎಲ್.ನಲ್ಲಿ ಶೇ.7 ರಷ್ಟು ಜಾಬ್ ಉಳಿತಾಯ ಕಡಿತಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲೇ ಸುತ್ತೋಲೆ ಹೊರಡಿಸಲಾಗಿದ್ದರೂ, ಪ್ರತಿಪಕ್ಷ ನಾಯಕರು ಕಾಂಗ್ರೆಸ್ ಸರಕಾರ ದೂಷಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್‌ ಬಿ ಖಂಡ್ರೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕೆ.ಆರ್.ಐ.ಡಿ.ಎಲ್.ನ ಇಬ್ಬರು ಎಂಜಿನಿಯರುಗಳ ಮೇಲೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಆರೋಪ ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಷಯ ತಿಳಿದ ಕೂಡಲೇ ತಾವು ಸೂಪರಿಂಟೆಂಡೆಂಟ್ ಎಂಜಿನಿಯರ್ ದರ್ಜೆಯ ಅಧಿಕಾರಿ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿ, 7 ದಿನಗಳಲ್ಲಿ ವರದಿ ನೀಡಲು ಸೂಚಿಸಿರುವುದಾಗಿ ತಿಳಿಸಿದರು.

ವರದಿಯಲ್ಲಿ ಶಾಸಕರು ಹೆಸರಿಸಿರುವ ಎಂಜಿನಿಯರುಗಳು ಭ್ರಷ್ಟಾಚಾರ ಮಾಡಿರುವುದು ಸಾಬೀತಾದರೆ, ಅಮಾನತು ಮಾಡಿ, ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದ ಅವರು, ತನಿಖಾ ವರದಿ ಬರುವ ಮೊದಲೇ ಪ್ರತಿಪಕ್ಷದ ನಾಯಕರು ಆತುರ ತೋರುತ್ತಿರುವುದು ಹಾಸ್ಯಾಸ್ಪದ ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಪಾರದರ್ಶಕ, ಜನಸ್ನೇಹಿ ಮತ್ತು ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದ ಈಶ್ವರ ಖಂಡ್ರೆ, ಯಾವುದೇ ಅಧಿಕಾರಿ, ಸಿಬ್ಬಂದಿ ಸಚಿವರ ಹೆಸರು ಹೇಳಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಸಾಕ್ಷ್ಯ, ಪುರಾವೆ ಸಹಿತ ದೂರು ಬಂದರೆ ಯಾವ ಮುಲಾಜಿಗೂ ಒಳಗಾಗದೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.

ಅಶೋಕ್ ಕುಮಾರ್ ರೈ ಅವರ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ಐ.ಡಿ.ಎಲ್. ಎಂ.ಡಿ. ಸ್ಪಷ್ಟೀಕರಣ ನೀಡಿದ್ದಾರೆ. ಕೆಆರ್.ಐ.ಡಿ.ಎಲ್.ನ 203ನೇ ಆಡಳಿತ ಮಂಡಳಿ ಸಭೆಯಲ್ಲೇ ನಿರ್ಣಯ ಕೈಗೊಂಡು 2021ರ ಆಗಸ್ಟ್ 21ರಂದು ಶೇ.7ರಷ್ಟು ಜಾಬ್ ಉಳಿತಾಯ ಕಡಿತಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಆಗ ಯಾರ ಸರಕಾರ ಇತ್ತು, ಯಾರು ಕೆ.ಆರ್.ಐ.ಡಿ.ಎಲ್. ಅಧ್ಯಕ್ಷರಾಗಿದ್ದರು ಎಂದು ಈಶ್ವರ್‌ ಖಂಡ್ರೆ ಪ್ರಶ್ನಿಸಿದರು.

ಕೆಆರ್.ಐ.ಡಿ.ಎಲ್. ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಯಾಗಿದ್ದು, 203ನೇ ಆಡಳಿತದ ಮಂಡಳಿ ಸಭಾ ನಡಾವಳಿಯಂತೆ ಈ ರೀತಿ ಚಾರ್ಚ್ ಪಡೆಯಲು ಅವಕಾಶ ಇದೆ. ಬಹುಶಃ ಮಾಹಿತಿಯ ಕೊರತೆಯಿಂದ ಶಾಸಕರು ಪತ್ರ ಬರೆದಿರಬಹುದು ಎಂದು ಈಶ್ವರ್‌ ಖಂಡ್ರೆ ಹೇಳಿದರು.

ಆದರೂ ಸಚಿವರ ಹೆಸರು ಹೇಳಿ ಹಣ ಕೇಳುತ್ತಿದ್ದಾರೆ ಎಂಬ ಗುರುತರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಕೊಟ್ಟಿದ್ದೇನೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದರು.

1998ರಿಂದ 2006ರವರೆಗೆ ಅಶೋಕ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾನೂನು ಬಾಹೀರವಾಗಿ ಅನರ್ಹ ಫಲಾನುಭವಿಗಳಿಗೆ 2500 ಎಕರೆ ಗೋಮಾಳವನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಅಶೋಕ್ ಸೇರಿ 10 ಜನರ ವಿರುದ್ಧ ಎಫ್.ಐ.ಆರ್. ಕೂಡ ದಾಖಲಾಗಿತ್ತು. ಅದಾದ ಬಳಿಕ 2019ರಿಂದ 2023ರವರೆಗೆ ಅವರು ಕಂದಾಯ ಸಚಿವರಾಗಿದ್ದರು. ಆಗ ಅವರು ರಾಜೀನಾಮೆ ಕೊಟ್ಟರೇನು? ಎಂದು ಪ್ರಶ್ನಿಸಿದರು.

ಲೊಟ್ಟೆ ಗೊಲ್ಲಹಳ್ಳಿಯ ಜಮೀನು ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಮತ್ತೊಂದು ಆರೋಪವೂ ಅವರ ಮೇಲಿತ್ತು. ರಾಜಕೀಯದಲ್ಲಿ ಆಧಾರ ರಹಿತ ಆರೋಪಗಳೂ ಬರುತ್ತವೆ. ಪ್ರತಿಪಕ್ಷಗಳು ತಾಳ್ಮೆಯಿಂದ ಇರಬೇಕು ಎಂದು ಆರ್. ಅಶೋಕ್ ಅವರಿಗೆ ಕಿವಿಮಾತು ಹೇಳಿದರು.

 

 .

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor