ಸರಕಾರಿ ಮಹಿಳಾ ನೌಕರರ ಸಂಘದ ಕಚೇರಿಗೆ ಜಾಗ ನೀಡಲು ಬದ್ಧ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Update: 2026-08-06 23:50 IST

ಬೆಂಗಳೂರು: ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ಕಚೇರಿಗೆ ಜಾಗ ನೀಡಲು ನಮ್ಮ ಸರಕಾರ ಬದ್ಧವಾಗಿದೆ. ವಿಧಾನಸೌಧ ಸುತ್ತಮುತ್ತ ಜಾಗ ಹುಡುಕಬೇಕು, ಹೊರ ಭಾಗದಲ್ಲಾದರೆ ದೊಡ್ಡ ಜಾಗ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಮಹಿಳೆಯರ ಪ್ರೋತ್ಸಾಹದಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದ್ದು, ನಾವು ಚುನಾವಣೆಗೂ ಮುನ್ನ ಮಹಿಳೆಯರ ಹಿತ ಕಾಯಲು ಪ್ರಕಟಿಸಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಗಳಿಂದ ಕ್ರಾಂತಿಕಾರಿ ಬದಲಾವಣೆ ಬಂದಿದೆ ಎಂದು ಅವರು ಹೇಳಿದರು.

ನಮ್ಮ ಯೋಜನೆಗಳನ್ನು ರಾಷ್ಟ್ರದಲ್ಲಿ ಬೇರೆ ರಾಜ್ಯಗಳು ಪಾಲನೆ ಮಾಡಿವೆ. ನಮ್ಮ ಸರಕಾರ ಈ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಖರ್ಚು ಮಾಡುತ್ತಿದೆ. ನಾಗರಿಕರ ಆಸ್ತಿ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಿಸಿ ದಾಖಲೆಗಳನ್ನು ಸರಿಪಡಿಸಿಕೊಡಲು ನಮ್ಮ ಸರಕಾರ ಮುಂದಾಗಿದೆ. ನಮ್ಮ ಗ್ಯಾರಂಟಿ ದೇಶದ ಗ್ಯಾರಂಟಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನೀವು ಆಗಾಗ್ಗೆ ಸೇರಿ ಸಂಘಟನೆ ಮಾಡಿಕೊಳ್ಳಿ. ಹೆಣ್ಣು ಮಕ್ಕಳು ಜಗಳ ಮಾತ್ರ ಮಾಡಿಕೊಳ್ಳಬೇಡಿ. ಸ್ಪರ್ಧೆ ಇದ್ದೇ ಇರುತ್ತದೆ. ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಮಹಿಳೆಯರು ಹಾಗೂ ಯುವಕರಿಂದ ಮಾತ್ರ ಸಾಧ್ಯ ಎಂಬುದು ನನ್ನ ನಂಬಿಕೆ. ನಮ್ಮ ಕಾಂಗ್ರೆಸ್ ಸರಕಾರ ಈ ಹಿಂದೆ ಮಹಿಳೆಯರಿಗಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆ ಕಾರ್ಯಕ್ರಮ ತಂದಿದೆ ಎಂದು ಅವರು ಹೇಳಿದರು.

ನಿಮ್ಮ ಸಂಘದಲ್ಲಿ 5,500 ಸದಸ್ಯೆಯರಿದ್ದಾರೆ. ನೀವು ಎಷ್ಟು ಜನ ಇದ್ದೀರೋ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ. ಸರಕಾರದ ವತಿಯಿಂದ ನಿಮಗೆ ಅಗತ್ಯ ಸಹಾಯ ಮಾಡಲಾಗುವುದು. ನಮ್ಮ ಮುಖ್ಯ ಕಾರ್ಯದರ್ಶಿ ಕಾನೂನು ಚೌಕಟ್ಟಿನಲ್ಲಿ ಬೇರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಮಗೆ ನೀಡುವ ಶಿಫಾರಸ್ಸು ಮೇಲೆ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನೀವು ಇಲ್ಲಿ ನನ್ನ ಜೊತೆ ಮಾತನಾಡುವುದು ಮುಖ್ಯವಲ್ಲ. ನಮ್ಮ ಸಂದೇಶವನ್ನು ನೀವು ಎಷ್ಟು ಜನ ಮಹಿಳಾ ಸಿಬ್ಬಂದಿಗೆ ಕಳುಹಿಸುತ್ತೀರಿ ಎಂಬುದು ಮುಖ್ಯ. ಶಿವಕುಮಾರ್ ನಿಂದ ನಿಮಗೆ ರಾಜ್ಯದಲ್ಲಿ ನ್ಯಾಯ ಸಿಗುತ್ತಿದೆ ಎಂಬ ವಿಶ್ವಾಸ ಇದೆ ಅಲ್ಲವೇ? ನೀವು ಮತ್ತೆ ಈ ಸರಕಾರವನ್ನು ಅಧಿಕಾರಕ್ಕೆ ತರಬೇಕು. ಆಗ ಇದಕ್ಕೆ ಬೆಲೆ ಇರುತ್ತದೆ. ಇಲ್ಲವಾದರೆ ಇದಕ್ಕೆ ಬೆಲೆ ಇರುವುದಿಲ್ಲ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಅವರು ಶುಭಕೋರಿದರು.

ನಾನು ಈ ಹಿಂದೆ ‘ನಾ ನಾಯಕಿ’ ಕಾರ್ಯಕ್ರಮ ಮಾಡಿದ್ದೆ. ಅಂದರೆ ಪ್ರತಿ ಮಹಿಳೆ ತನ್ನ ಮನೆಯಲ್ಲಿ ನಾಯಕಿಯಾಗಿರುತ್ತಾಳೆ. ಅದು ನಮ್ಮಲ್ಲಿ ಹೆಚ್ಚು ಚಾಲ್ತಿಗೆ ಬರಲಿಲ್ಲ. ಮತ್ತೆ ಇದಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸುತ್ತೇನೆ. ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಲು ನಾವು ಜಾಗೃತಿ ಮೂಡಿಸಬೇಕು. ಮುಂದೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆಗ ಯಾರು ಏನಾಗುತ್ತಾರೆ ಹೇಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ನುಡಿದರು.

ಮೋಟಮ್ಮ ಅವರು ಸಿಬ್ಬಂದಿಯಾಗಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದರು. ನಾಯಕತ್ವ ಗುಣ ಬೆಳೆಸಿಕೊಳ್ಳಿ, ಸಾಕಷ್ಟು ಅವಕಾಶಗಳಿವೆ. ನಮ್ಮ ಸರಕಾರ ನಿಮ್ಮ ಜತೆ ಇದೆ. ನೀವು ನಮ್ಮ ಸರಕಾರದ ಜತೆ ಇರಬೇಕು ಎಂದು ಮುಖ್ಯಮಂತ್ರಿ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News