ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಇಬ್ಬರು ಆರೋಪಿಗಳ ಅರ್ಜಿ

Update: 2026-08-07 00:08 IST

ದರ್ಶನ್ | ರೇಣುಕಾಸ್ವಾಮಿ

ಬೆಂಗಳೂರು: ನಟ ದರ್ಶನ್ ಆರೋಪಿ ಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ದರ್ಶನ್ ಸ್ನೇಹಿತರು ಹಾಗೂ ಪ್ರಕರಣದ 10 ಮತ್ತು 14ನೇ ಆರೋಪಿಗಳಾಗಿರುವ ವಿನಯ್ ಹಾಗೂ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಹಿಸಿದ ಪಾತ್ರವನ್ನು ಅರ್ಜಿಯಲ್ಲಿ ಪ್ರದೋಷ್ ವಿವರಿಸಿದ್ದಾನೆ. ಅಲ್ಲದೆ, ರೇಣುಕಾಸ್ವಾಮಿ ಮೊಬೈಲ್ ನಲ್ಲಿದ್ದ ಮಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಸಾಯಿಸುವುದಾಗಿ ದರ್ಶನ್ ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್ ಪರ ನಾನು ಸಾಕ್ಷ್ಯ ನುಡಿಯುತ್ತೇನೆ ಎಂದು ಪ್ರದೋಷ್ ಅರ್ಜಿಯಲ್ಲಿ ಕೋರಿದ್ದಾರೆ.

ಈ ಅರ್ಜಿಗೆ ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು ಲಿಖಿತವಾಗಿಯೇ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು ಎಂದು ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಲಯವನ್ನು ಬಲವಾಗಿ ಕೋರಿದ್ದಾರೆ. ಇದರಿಂದ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್ ಮತ್ತು ಪ್ರದೋಷ್ ಸಲ್ಲಿಸಿರುವ ಅರ್ಜಿ ಸಂಬಂಧ ಇತರ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆ.10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.

ಪ್ರದೋಷ್ ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್ ಜೊತೆಗಿನ ಸ್ನೇಹ, 2024ರ ಜೂ.9ರಂದು ನಡೆದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ದರ್ಶನ್ ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್ ತಿಳಿಸಿದ್ದಾರೆ.

ಇನ್ನೂ ‘ರೇಣುಕಾಸ್ವಾಮಿ ಇನ್ ಸ್ಟಾಗ್ರಾಂ, ಫೇಸ್‌ಬುಕ್ ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದ್ದೇನೆ. ವಾಸ್ತವವಾಗಿ ಕೊಲೆ ಘಟನೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್‌ನನ್ನು ತಡೆಯಲು ಪ್ರಯತ್ನಿಸಿದೆ. ದರ್ಶನ್ ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗನ್‌ನಿಂದ ಗುಂಡು ಹಾರಿಸಿ ಸಾಯಿಸುವುದಾಗಿ ದರ್ಶನ್ ಬೆದರಿಸಿದರು. ಅದಕ್ಕೆ ಬೆದರಿದ ನಾನು ದರ್ಶನ್‌ಗೆ ಸಹಾಯ ಮಾಡಿದೆ’ ಎಂದು ಹೇಳಿರುವ ಪ್ರದೋಷ್, ‘ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪ್ರದೋಷ್ ಅರ್ಜಿಯಲ್ಲಿ ಕೋರಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್ ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್ ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಅರ್ಜಿಯಲ್ಲಿ ವಿನಯ್ ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇರಬೇಕು ಎಂದು ಕೋರಿದ್ದಾರೆ.

ಈ ಮಧ್ಯೆ ಪ್ರದೋಷ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್ ಹಾಗೂ ಇತರ ಆರೋಪಿಗಳು, ಅರ್ಜಿಯನ್ನು ಪರಿಗಣಿಸಬೇಕು. ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್ ಖಚಿತಪಡಿಸಬೇಕು. ಇತರ ಆರೋಪಿಗಳ ವಿರುದ್ಧವೇ ಪ್ರದೋಷ್ ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆ.10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News