ಅತೃಪ್ತರ ಮನವೊಲಿಕೆಯ ಮಧ್ಯೆಯೇ ಖಾತೆ ಹಂಚಿಕೆ ಕಗ್ಗಂಟು
ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ನಾಯಕರ ಮನವೋಲಿಕೆ ಪ್ರಯತ್ನದ ಬಳಿಕ ಒಂದು ಹಂತಕ್ಕೆ ಸಮಾಧಾನಗೊಂಡಿದ್ದಾರೆ. ಆದರೆ, ಇದೀಗ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಕಗ್ಗಂಟ್ಟಾಗಿದೆ.
ನಿನ್ನೆ ತಡರಾತ್ರಿಯ ವರೆಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಬಂಡಾಯದ ಬಾವುಟ ಹಿಡಿದಿದ್ದ ಸಚಿವ ಸ್ಥಾನದ ಆಕಾಂಕ್ಷಿ ಹಿರಿಯ ಶಾಸಕರ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
ಪ್ರಮುಖವಾಗಿ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮತ್ತು ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಹಾಗೂ ಎಚ್.ಕೆ.ಪಾಟೀಲ್ ಅವರ ಮನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ರಣದೀಪ್ ಸುರ್ಜೇವಾಲ ಖುದ್ದು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು. ಈ ವೇಳೆ ‘ನಮಿಂದ ತಪ್ಪಾಗಿದೆ ಕ್ಷಮಿಸಿ, ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಕೃಷ್ಣಪ್ಪ ಹೇಳಿಕೆ ನೀಡಿದ್ದಾರೆ.
ಈ ನಡುವೆಯೇ ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ದಿನೇಶ್ ಗುಂಡೂರಾವ್, ಎಸ್.ಎನ್.ನಾರಾಯಣಸ್ವಾಮಿ, ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಸಚಿವ ಸ್ಥಾನದ ವಂಚಿತ ಹಿರಿಯ ಶಾಸಕರು, ‘ಸಂಪುಟದಲ್ಲಿ ತಮಗೆ ಯಾವ ಕಾರಣಕ್ಕಾಗಿ ಸ್ಥಾನ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸುತ್ತಿರುವುದು, ಕಾಂಗ್ರೆಸ್ ಹೈಕಮಾಂಡ್‍ಗೆ ತಲೆ ನೋವಾಗಿದೆ.
ಒಂದೆಡೆ ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಕ್ರಿಯೆಗಳು ಬಿರುಸಿನಿಂದ ನಡೆಯುತ್ತಿದ್ದರೆ, ಮತ್ತೊಂದೆಡೆ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವೂ ಕಗ್ಗಂಟ್ಟಾಗಿದೆ. ಹಿರಿಯರು ‘ತಮಗೆ ಪ್ರಮುಖ ಖಾತೆಗಳೇ ಬೇಕು’ ಎಂದು ಪಟ್ಟು ಹಿಡಿದಿದ್ದಾರೆ. ಆ.3ರ ಸಂಜೆ ಸಂಪುಟ ವಿಸ್ತರಣೆಯಾಗಿದ್ದು, ಅಂದು ಸಂಜೆಯೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಇದೀಗ ಮೂರು ದಿನಗಳು ಕಳೆದರೂ ಖಾತೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ.
ಎಲ್ಲ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರು:
‘ನಮ್ಮಲ್ಲಿ(ಕಾಂಗ್ರೆಸ್)ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಮಾಧ್ಯಮಗಳಲ್ಲಿ. ನಮ್ಮ ಹಿರಿಯ ನಾಯಕರ ಭಾವನೆಗೆ ನಾವು ಗೌರವ ಸಲ್ಲಿಸಬೇಕು. 140 ಶಾಸಕರು ಹಾಗೂ 40 ಪರಿಷತ್ ಸದಸ್ಯರಿದ್ದು, ಆ ಪೈಕಿ ನಾವು ಸಚಿವ ಸ್ಥಾನ ನೀಡಲು ಸಾಧ್ಯವಿರುವುದು ಕೇವಲ 33 ಜನರಿಗೆ ಮಾತ್ರ. ನಮ್ಮ ಪಕ್ಷದಲ್ಲಿ ಎಲ್ಲರೂ ಸಚಿವ ಸ್ಥಾನಕ್ಕೆ ಅರ್ಹರೇ, ನಾವು ಅವರ ಆಸೆ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರಾಗಿದ್ದು, ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ