Bengaluru | ಏರ್ ಗನ್‍ನಿಂದ ಗುಂಡು ಹಾರಿಸಿದ ಆರೋಪ: ಐಟಿ ಉದ್ಯೋಗಿಯ ಬಂಧನ
ಬೆಂಗಳೂರು: ನಗರದ ಹೊರವಲಯದಲ್ಲಿರುವ ಆನೇಕಲ್ ತಾಲೂಕಿನ ಅಪಾರ್ಟ್‍ಮೆಂಟ್ ಒಂದರ ಬಾಲ್ಕನಿಯಲ್ಲಿ ನಿಂತು ಏರ್ ಗನ್‍ನಿಂದ ಅಪಾರ್ಟ್‍ಮೆಂಟ್‍ನ ಭದ್ರತಾ ಸಿಬ್ಬಂದಿ ಹಾಗೂ ಪಾರ್ಕಿಂಗ್ ಶೆಡ್‍ನತ್ತ ಗುಂಡು ಹಾರಿಸಿದ ಆರೋಪದ ಮೇಲೆ ಸೂರ್ಯನಗರ ಪೊಲೀಸರು, ಐಟಿ ಉದ್ಯೋಗಿಯೊಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯು ವೈಟ್‍ಫೀಲ್ಡ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಂಟು ತಿಂಗಳಿಂದ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್‍ಮೆಂಟ್ಸ್‍ನಲ್ಲಿ ವಾಸಿಸುತ್ತಿದ್ದರು.
ಮದ್ಯಪಾನ ಮಾಡಿದ್ದ ತಿವಾರಿ, ಫೋನ್‍ನಲ್ಲಿ ಮಾತನಾಡುತ್ತಾ ಜೋರಾಗಿ ಕೂಗಾಡುತ್ತಿದ್ದರು. ನಂತರ ಬಾಲ್ಕನಿಗೆ ಬಂದು ಏರ್ ಗನ್‍ನಿಂದ ಗುಂಡು ಹಾರಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಗುಂಡು ಹಾರಿಸಿ, ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದರು. ಏರ್ ಗನ್‍ನಿಂದ ಹಾರಿಸಿದ ಗುಂಡುಗಳು (ಪೆಲೆಟ್‍ಗಳು) ನಿಲ್ಲಿಸಿದ್ದ ಹಲವು ವಾಹನಗಳು ಮತ್ತು ಪಾರ್ಕಿಂಗ್ ಶೆಡ್‍ಗೆ ಬಡಿದಿವೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಅಪಾರ್ಟ್‍ಮೆಂಟ್‍ಗೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು, ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.