×
Ad

ಜೆಡಿಎಸ್ ನಾಯಕರ ನಡೆಯಿಂದ ನೋವಾಗಿದೆ : ಜಿ.ಟಿ.ದೇವೇಗೌಡ

‘ಪಕ್ಷದ ಕಚೇರಿಗೆ ಹೋಗುವ ಅಗತ್ಯವಿಲ್ಲ, ಕ್ಷೇತ್ರದಲ್ಲೇ ಕೆಲಸ ಮಾಡುತ್ತೇನೆ’

Update: 2025-11-13 20:54 IST

ಜಿ.ಟಿ.ದೇವೇಗೌಡ

ಬೆಂಗಳೂರು : ಎಲ್ಲ ಪಕ್ಷದ ನಾಯಕರುಗಳ ಹಿಂದೆ ಚಾಡಿಕೋರರು ಇರುತ್ತಾರೆ. ಅದರಂತೆ ನಮ್ಮ ಪಕ್ಷದಲ್ಲೂ(ಜೆಡಿಎಸ್) ಜಾಡಿಕೋರರಿದ್ದು, ಅಂತಹವರ ಚಾಡಿ ಮಾತುಗಳಿಂದಾಗಿ ಪಕ್ಷ ಕಟ್ಟಿದವರಿಗೆ ಸೂಕ್ತ ಸ್ಥಾನಮಾನಗಳು ಸಿಗುವುದಿಲ್ಲ ಎಂದು ಜೆಡಿಎಸ್‍ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತಾರು ವರ್ಷಗಳ ಕಾಲ ಪಕ್ಷವನ್ನು ಕಟ್ಟಿ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ಜೆಡಿಎಸ್ ನಾಯಕರ ನಡೆಯಿಂದ ನನಗೆ ನೋವಾಗಿದೆ. ಅವರ ಮೇಲೆ ಅಸಮಾಧಾನವಿದೆ. ಆದರೆ, ನಾನು ಜೆಡಿಎಸ್‍ನಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಕಷ್ಟಪಟ್ಟು ದುಡಿದ ಪಕ್ಷವನ್ನು ಬಿಡುವುದಿಲ್ಲ ಎಂದರು.

ಜೆಡಿಎಸ್ ಪಕ್ಷದ ಸಮಿತಿಯಿಂದ ನನ್ನನ್ನು ಕೈಬಿಡಲಾಗಿದೆ. ಯಾವ ಸಮಿತಿಯಲ್ಲೂ ನಾನಿಲ್ಲ. ಹೀಗಾಗಿ ಪಕ್ಷದ ಕಚೇರಿಯಲ್ಲಿ ನನಗೇನೂ ಕೆಲಸವಿಲ್ಲ. ಅಲ್ಲಿಗೆ ಹೋಗುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತೇನೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗುವ ಆಸೆ ನನಗೇನೂ ಇರಲಿಲ್ಲ. ಆಸೆ ತೋರಿಸಿ ಏನನ್ನೂ ಹೇಳದೆ ನನ್ನ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರವಾಯಿತು. ಯಾವ ಕಾರಣಕ್ಕಾಗಿ ನನ್ನ ಹೆಸರನ್ನು ಕೈಬಿಡಲಾಯಿತು ಎಂಬುದನ್ನು ಎಚ್.ಡಿ.ಕುಮಾರಸ್ವಾಮಿ ಅವರು ಈವರೆಗೂ ಸ್ಪಷ್ಟಪಡಿಸಿಲ್ಲ. ಅಂದಿನಿಂದ ನನ್ನ ಪಾಡಿಗೆ ನಾನು, ಅವರ ಪಾಡಿಗೆ ಅವರು ಇದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರು ಬೇಡವಾಗಿದೆ. ಬದಲಿಗೆ ಚಾಡಿ ಹೇಳುವವರು ಅವರಿಗೆ ಪ್ರಿಯವಾಗುತ್ತಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಪಾಂಡವಪುರದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ, ‘ನೀವೇ ಶಾಸಕಾಂಗ ಪಕ್ಷದ ನಾಯಕ’ ಎಂದು ಸೂಚ್ಯವಾಗಿ ಹೇಳಿದ್ದರು. ಎದುರಾಳಿ ಕಾಂಗ್ರೆಸ್ ಪಾಳಯದಲ್ಲೂ ಈ ಮಾತು ಚಾಲ್ತಿಯಲ್ಲಿತ್ತು. ಅಂದೇ ನಡೆದ ಕಾವೇರಿ ನೀರಾವರಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಈ ವಿಷಯ ಪ್ರಸ್ತಾಪಿಸಿದ್ದರು. ಅಧಿಕೃತವಾಗಿ ಘೋಷಣೆ ಆಗದೆ ಹೇಗೆ ನಾಯಕನಾಗುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ನಿಖಿಲ್‍ಗೆ ಸೂಚ್ಯವಾಗಿ ಹೇಳಿದ್ದರಿಂದ ಹೊಸ ಕಚೇರಿಯನ್ನೂ ಆರಂಭಿಸಿದ್ದೆ. ಆದರೆ, ಯಾವ ಕಾರಣವನ್ನೂ ನೀಡದೆ ಬೇರೆಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನು ಘೋಷಿಸಿದರು. ಇದರಿಂದ ತುಂಬಾ ನೋವಾಯಿತು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News