ಹನೂರು ಶೂಟೌಟ್ ಪ್ರಕರಣ: ಸಿಎಂ ಜೊತೆ ಚರ್ಚಿಸಿ ನ್ಯಾಯಾಂಗ ತನಿಖೆಗೆ ತೀರ್ಮಾನ: ರಾಮಲಿಂಗಾರೆಡ್ಡಿ

Update: 2026-08-17 19:09 IST

ಬೆಂಗಳೂರು : ‘ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಎನ್‍ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಸ್ಪಷ್ಟನೆ ನೀಡಿದ ಸಚಿವರು, ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಅದರ ವರದಿ ಬರಲಿ. ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮೃತರು ಬೇಟೆಗಾರರಾಗಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಲಿದೆ. ಪರಿಹಾರ ನೀಡುವ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ತನಿಖಾ ವರದಿ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.

ಹನೂರು ವ್ಯಾಪ್ತಿಯ ಶಾಗ್ಯ ಬಳಿ ಕಳ್ಳಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರು. ಹಿಂದಿನ ದಿನ ರಾತ್ರಿ 8ಕ್ಕೆ ಇವರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದೆ. ಎರಡು ತಂಡಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅರಣ್ಯ ಪ್ರದೇಶದಲ್ಲಿ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಬ್ಯಾಟರಿ ಬೆಳಕು ಕಂಡಿದೆ. ಬಂಡೆ ಬಳಿ ಬೇಟೆಗಾರರು ಇದ್ದಿದ್ದು ಗೊತ್ತಾಗಿ ಶರಣಾಗುವಂತೆ ಮನವಿ ಮಾಡಲಾಯಿತು. ಈ ವೇಳೆ ಬೇಟೆಗಾರರ ಕಡೆಯಿಂದ ಗುಂಡಿನ ದಾಳಿ ನಡೆದಿದ್ದು, ಆಗ ಆತ್ಮರಕ್ಷಣೆಗೆ ಇಲಾಖಾ ಸಿಬ್ಬಂದಿ ಗುಂಡಿನ ಮೂಲಕ ಮರುದಾಳಿ ಮಾಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಈ ವೇಳೆ ಬೇಟೆಗಾರರು ಎತ್ತರದ ಪ್ರದೇಶದಲ್ಲಿದ್ದರು, ಅಸ್ಪಷ್ಟವಾಗಿ ಗೋಚರಿಸುತ್ತಿದ್ದರು. ಗುಂಡಿನ ದಾಳಿ ಉದ್ದೇಶಪೂರ್ವಕ ಆಗಿರಲಿಲ್ಲ. ಬೇಟೆಗಾರರಿಂದ ಕೂಗಾಟ, ಕಿರುಚಾಟ ಕೇಳಿಬಂತು, ಸಿಬ್ಬಂದಿ ಬಳಿ ಹೋದಾಗ ಒಬ್ಬ ಓಡಿ ಹೋಗುತ್ತಿರುವುದು ಕಂಡುಬಂತು. ಮೂವರಿಗೆ ಗುಂಡು ತಗುಲಿತ್ತು, ಅವರು ಮೃತಪಟ್ಟ ಬಗ್ಗೆ ವೈದ್ಯರು ಖಚಿತಪಡಿಸಿದರು. ನಂತರ ಮೂವರ ಮೃತದೇಹಗಳನ್ನು ಮೈಸೂರಿಗೆ ಸ್ಥಳಾಂತರ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ ಒಟ್ಟು 10 ಸಿಬ್ಬಂದಿ ಭಾಗವಹಿಸಿದ್ದರು. ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದರು.

ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೇಟೆಗಾರರಿಂದ ಎರಡು ಬಂದೂಕು, ಎರಡು ಬ್ಯಾಗ್, ಅದರೊಳಗಿದ್ದ ತಟ್ಟೆ, ದಿನಸಿ, ಬಿಸ್ಕತ್ತು, ಮೊಬೈಲ್‍ಗಳು, ಚಾಕುಗಳು, ಪಟಾಕಿ, ಮದ್ದಿನ ಬಾಕ್ಸ್, ನಾಡಬಂದೂಕು ಗುಂಡುಗಳು, ಚಾರ್ಜರ್ ಬ್ಯಾಟರಿ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಪ್ರಾಣಿ ಮಾಂಸ ಬ್ಯಾಗ್‍ನಲ್ಲಿ ಪತ್ತೆ ಆಗಿದ್ದು, ಸುಮಾರು 20ರಿಂದ35 ಕೆಜಿಯಷ್ಟು ಒಂದೇ ಪ್ರಾಣಿಯ ಮಾಂಸ ವಶಪಡಿಸಿಕೊಳ್ಳಲಾಗಿದೆ. ಮೃತ ಬೇಟೆಗಾರರು ಅನುಮತಿ ಇಲ್ಲದೇ ಅರಣ್ಯ ಪ್ರವೇಶ ಮಾಡಿದ್ದರು. ಬೇರೆ ಯಾವ ಪ್ರಕರಣಗಳಲ್ಲಿ ಭಾಗವಹಿಸಿದ್ದಾರೆ ಎನ್ನುವ ಕುರಿತು ಪರಿಶೀಲನೆ ಮಾಡಲಾಗಿದೆ. ಬೇಟೆಗಾರರು ಅರಣ್ಯದಲ್ಲಿ 5ರಿಂದ 8 ಕಿ.ಮೀ ಓಡಾಡಿದ್ದಾರೆ. ಜತೆಗೆ, ಜಿಂಕೆ ಮಾಂಸ ಅವರ ಬಳಿ ಸಿಕ್ಕಿದೆ ಎಂದು ರಾಮಲಿಂಗಾರೆಡ್ಡಿ ಸದನದಲ್ಲಿ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News