Monsoon session | ಸಚಿವ ನಾಗೇಂದ್ರ ವಜಾಕ್ಕೆ ಪ್ರತಿಪಕ್ಷಗಳ ಪಟ್ಟು : ಅರ್ಧ ದಿನದ ಕಲಾಪ ಬಲಿ

Update: 2026-08-17 17:51 IST

ಬೆಂಗಳೂರು : ವಾಲ್ಮೀಕಿ ನಿಗಮದ ಅನುದಾನ ದುರ್ಬಳಕೆ ಆರೋಪದಲ್ಲಿ ಸಿಲುಕಿರುವ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟುಹಿಡಿದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು. ಇದರಿಂದ ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಗಿದ್ದರಿಂದ ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ಅರಣ್ಯ ಸಿಬ್ಬಂದಿಯಿಂದ ಮೂವರು ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ ಬಳಿಕ ಸ್ಪೀಕರ್ ಜಿ.ಎಸ್.ಪಾಟೀಲ್, ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ‘ಕಳಂಕಿತ ಮತ್ತು ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವರನ್ನು ಸದನದಲ್ಲಿ ಕೂರಿಸಿಕೊಂಡು ಪ್ರಶ್ನೋತ್ತರ ಕಲಾಪ ಹೇಗೆ ನಡೆಸಲು ಸಾಧ್ಯ’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಅಲ್ಲದೆ, ‘ಮೊದಲು ಆ ಸಚಿವರ ರಾಜೀನಾಮೆ ಪಡೆಯಿರಿ’ ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈ ಹಿಂದೆ ಇದೇ ಸದನದಲ್ಲಿ ವಾಲ್ಮೀಕಿ ನಿಗಮದಲ್ಲಿ 187ಕೋಟಿ ರೂ.ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ, ಸಚಿವರ ರಾಜೀನಾಮೆ ಪಡೆದಿದ್ದರು. ಅವರನ್ನು ಸಂಪುಟದಿಂದ ತೆಗೆದಿದ್ದು ಏಕೆ? ಮತ್ತೆ ಸೇರ್ಪಡೆ ಮಾಡಿಕೊಂಡಿರುವುದು ಏಕೆ? ಎಂಬುದನ್ನು ಸದನಕ್ಕೆ ಹೇಳಬೇಕಲ್ಲವೇ?. ಅವರ ರಾಜೀನಾಮೆ ಪಡೆಯುವವರೆಗೂ ಸದನ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಇದರಿಂದ ಸದನದಲ್ಲಿ ತೀವ್ರ ಗದ್ಧಲ ಉಂಟಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ, ಆರೋಪ-ಪ್ರತ್ಯಾರೋಪ ನಡೆಯಿತು. ಯಾರು ಏನು ಮಾತನಾಡುತ್ತಿದ್ದಾರೆಂಬುದು ಕೇಳಿಸದಂತಹ ಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಜಿ.ಎಸ್.ಪಾಟೀಲ್, ‘ನೀವು (ವಿಪಕ್ಷ ನಾಯಕರು)ನೋಟೀಸ್ ನೀಡಿ ವಿಷಯ ಪ್ರಸ್ತಾಪಿಸಿ, ಏಕಾಏಕಿ ವಿಚಾರ ಪ್ರಸ್ತಾಪಿಸಿದರೆ ಹೇಗೆ?, ನಿಯಮಾವಳಿಗಳ ಪ್ರಕಾರ ಸದನ ನಡೆಯಬೇಕಲ್ಲವೇ?’ ಎಂದು ಪ್ರಶ್ನಿಸಿದರು.

ಆದರೆ, ಬಿಜೆಪಿ ಸದಸ್ಯರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸರಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ತಮ್ಮ ತಮ್ಮ ಸ್ಥಾನದಲ್ಲಿ ಎದ್ದುನಿಂತು ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲೇಬೇಕು ಪಟ್ಟು ಹಿಡಿದು ಘೋಷಣೆ ಕೂಗಿದರು. ‘ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡಬೇಕು. ಜಾರ್ಜ್‍ಶಿಟ್‍ನಲ್ಲಿಯೂ ಅವರು ಆರೋಪಿಯಾಗಿದ್ದಾರೆ’ ಎಂದು ಬಿಜೆಪಿಯ ಡಾ.ಅಶ್ವತ್ಥ ನಾರಾಯಣ್ ಆಗ್ರಹಿಸಿದರು.

ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಬಿಜೆಪಿ ಸದಸ್ಯರ ಗದ್ದಲದ ಮಧ್ಯೆ ಸದನದ ನಿಯಮಾವಳಿ ಉಲ್ಲೇಖಿಸಿ, ‘ಪ್ರತಿಪಕ್ಷ ಸದಸ್ಯರು ಸುಖಾಸುಮ್ಮನೆ ಒಬ್ಬ ಸಚಿವರ ವಿರುದ್ಧ ಆರೋಪ ಮಾಡಲು ಅವಕಾಶ ನೀಡಬಾರದು. ನೋಟಿಸ್ ನೀಡದೆ ಏಕಾಏಕಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ, ಈ ವಿಚಾರದ ಬಗ್ಗೆ ಸ್ಪೀಕರ್ ರೂಲಿಂಗ್ ನೀಡಬೇಕು’ ಎಂದು ಕೋರಿದರು.

‘ಸದನದಲ್ಲಿ ಗೂಂಡಾ ವರ್ತನೆ ನಡೆಸಲು ಅವಕಾಶ ಕೊಡುವುದು ಬೇಡ. ಇವರಿಗೆ ಸದನ ನಡೆಯುವುದು ಬೇಕಿಲ್ಲ. ಬಿಜೆಪಿಯೊಳಗಿನ ಕಿತ್ತಾಟವನ್ನೇ ಸರಿ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಇವರಿಗೆ ನಾಚಿಕೆ ಆಗುವುದಿಲ್ಲ, ರಣಹೇಡಿಗಳು. ಸದನದ ಮೇಲೆ ದಬ್ಬಾಳಿಕೆ ಮಾಡಲು ಅವಕಾಶ ನೀಡದೇ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಇದಕ್ಕೆ ತಲೆಕೆಡಿಸಿಕೊಳ್ಳದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಏರಿದ ಧ್ವನಿಯಲ್ಲಿ ‘ಸಚಿವ ನಾಗೇಂದ್ರ ರಾಜೀನಾಮೆ ನೀಡಲೇಬೇಕು’ ಎಂದು ಆಗ್ರಹಿಸಿ ಘೋಷಣೆ ಕೂಗಿದ್ದರಿಂದ ಗದ್ದಲ ಹೆಚ್ಚಾಯಿತು. ಸ್ಪೀಕರ್ ಜಿ.ಎಸ್.ಪಾಟೀಲ್, ‘ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕೊಡಿ’ ಎಂದು ಪದೇ ಪದೇ ಮನವಿ ಮಾಡಿದರೂ ಯಾರೊಬ್ಬರು ಸಹಕಾರ ನೀಡಲಿಲ್ಲ. ಹೀಗಾಗಿ ಸದನವನ್ನು ಅರ್ಧಗಂಟೆ ಕಾಲ ಮುಂದೂಡಿದರು.

‘ವಾಲ್ಮೀಕಿ ನಿಗಮದ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನಾಗೇಂದ್ರರನ್ನು ಈ ಹಿಂದೆ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಹಾಗಿದ್ದರೆ, ಮತ್ತೆ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದೇಕೆ?. ಈ ಪ್ರಶ್ನೆಗೆ ಸರಕಾರ ಉತ್ತರಿಸಬೇಕು. ನಿಗಮದ ಹಣ ದುರುಪಯೋಗದ ವಿಚಾರವನ್ನು ಈ ಹಿಂದೆ ಸಿಎಂ ಸಿದ್ದರಾಮಯ್ಯರೇ ಒಪ್ಪಿಕೊಂಡಿದ್ದರು. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಸರಕಾರದ ನೈತಿಕತೆಯನ್ನೇ ಪ್ರಶ್ನಿಸುವಂತಾಗಿದೆ. ಆದುದರಿಂದ ಸಿಎಂ ಡಿ.ಕೆ.ಶಿವಕುಮಾರ್, ನಾಗೇಂದ್ರರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು. ಭ್ರಷ್ಟಾಚಾರದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯವನ್ನು ರಾಜ್ಯದ ಜನರ ಮುಂದೆ ಇಡಬೇಕು’

-ಆರ್.ಅಶೋಕ್ ಪ್ರತಿಪಕ್ಷ ನಾಯಕ

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News