ಹನೂರು ಶೂಟೌಟ್ ಪ್ರಕರಣ ಮೇಲ್ಮನೆಯಲ್ಲೂ ಪ್ರತಿಧ್ವನಿ: ನ್ಯಾಯಾಂಗ ತನಿಖೆ, 1 ಕೋಟಿ ರೂ. ಪರಿಹಾರಕ್ಕೆ ವಿಪಕ್ಷಗಳ ಆಗ್ರಹ
ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯಬೀಟ್‍ನಲ್ಲಿ ಅರಣ್ಯ ಅಧಿಕಾರಿಗಳ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ವಿಧಾನ ಪರಿಷತ್‍ನಲ್ಲೂ ಪ್ರತಿಧ್ವನಿಸಿದೆ.
ಮೂವರ ಎನ್‍ಕೌಂಟರ್ ಆದ ಸಂಬಂಧ ತಮಿಳುನಾಡಿ ಸಿಎಂ ಜೋಸೆಫ್ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ, ಅಧಿವೇಶನದ ಮೂರನೇ ದಿನವಾದ ಸೋಮವಾರ ಪರಿಷತ್ತಿನಲ್ಲಿ ಕಲಾಪದ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಸರಕಾರದ ಎದುರು ಈ ವಿಚಾರವನ್ನು ಪ್ರಸ್ತಾಪಿಸಿದವು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಚಾಮರಾಜನಗರದ ಹನೂರಿನಲ್ಲಿ ಮೂವರ ಮೇಲೆ ಎನ್‍ಕೌಂಟರ್ ಆಗಿದೆ. ಇದು ಸರಕಾರಿ ಪ್ರಾಯೋಜಿತ ಕಗ್ಗೊಲೆ. ಈ ಘಟನೆಗೆ ಹೊಣೆ ಯಾರು? ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾನಾಯಕ ಡಾ.ಯತೀಂದ್ರ ಸಿದ್ದರಾಯಯ್ಯ, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಸಚಿವರಿಂದ ಉತ್ತರ ಕೊಡಿಸಲಾಗುವುದು. ಸದ್ಯ ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದರಿಂದ ಸಮಾಧಾನಗೊಳ್ಳದ ಛಲವಾದಿ, ಎನ್‍ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಮೃತರ ಕುಟುಂಬಸ್ಥರಿಗೆ 1 ಕೋಟಿ ರೂ. ಪರಿಹಾರ ಘೋಷಿಸಬೇಕು. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದು ಅತ್ಯಂತ ಗಂಭೀರ ಹಾಗೂ ಬರ್ಬರ ಕೃತ್ಯವಾಗಿದ್ದು, ಸರಕಾರವೇ ನಡೆಸಿದ ಎನ್‍ಕೌಂಟರ್ ಎಂಬ ಅನುಮಾನವಿದೆ ಎಂದು ವಾಗ್ದಾಳಿ ನಡೆಸಿದರು.
ಸಭಾನಾಯಕ ಡಾ.ಯತೀಂದ್ರ ಪ್ರತಿಕ್ರಿಯಿಸಿ, ಸರಕಾರ ಪ್ರಕರಣವನ್ನು ಮುಚ್ಚಿಹಾಕುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈಗ ಯಾವುದೇ ನೋಟಿಸ್ ನೀಡದೆ ವಿಷಯವನ್ನು ಪ್ರಸ್ತಾಪಿಸುವುದು ಸರಿಯಲ್ಲ. ಸಭಾಪತಿಗಳು ಮೊದಲು ಪ್ರಶ್ನೋತ್ತರ ಕಲಾಪ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನಿಯಮಾವಳಿಗಳ ಪುಸ್ತಕವನ್ನು ಪ್ರದರ್ಶಿಸಿ, ಯಾವುದೇ ವಿಷಯ ಪ್ರಸ್ತಾಪಿಸುವ ಮುನ್ನ ಸಭಾಪತಿಗಳಿಗೆ ನೋಟಿಸ್ ನೀಡಬೇಕು. ಅದನ್ನು ಪರಿಶೀಲಿಸಿದ ಬಳಿಕವೇ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಆದರೆ, ನೋಟಿಸ್ ನೀಡದೆ ನೇರವಾಗಿ ಚರ್ಚೆಗೆ ಅವಕಾಶ ಕೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಹಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಏಕೆ ಬಂಧಿಸಿಲ್ಲ? ಮೂವರ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮತ್ತೆ ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರತಿಪಕ್ಷದ ಸಾಲಿನಿಂದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಭೋಜೇಗೌಡ, ಶರವಣ ಸೇರಿದಂತೆ ಹಲವರು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರಕಾರದ ಪರವಾಗಿ ಸಚಿವರಾದ ಶಿವರಾಜ್ ತಂಗಡಗಿ, ಯು.ಟಿ.ಖಾದರ್, ಬಸವರಾಜ ರಾಯರೆಡ್ಡಿ ಹಾಗೂ ಯತೀಂದ್ರ ಅವರು ಪ್ರತಿಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದರು. ಉಭಯ ಸದಸ್ಯರ ವಾಕ್ಸಮರ ಹೆಚ್ಚಾಗಿ ಸದನ ನಿಯಂತ್ರಣ ಬಾರದ ಹಿನ್ನೆಲೆ ಸಭಾಪತಿ ಸಲೀಂ ಅಹ್ಮದ್ 10 ನಿಮಿಷ ಕಲಾಪವನ್ನು ಮುಂದೂಡಿದರು.
ನಾಗೇಂದ್ರ ರಾಜೀನಾಮೆಗೆ ಪಟ್ಟು: ಹನೂರು ಪ್ರಕರಣದ ವಿಚಾರ ಚರ್ಚೆಯ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರವನ್ನು ವಿಪಕ್ಷಗಳು ಪ್ರಸ್ತಾಪಿಸಿದವು. ಹಗರಣದ ಆರೋಪ ಎದುರಿಸಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.
ಬಿ.ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಸಿಎಂ ಸದನಕ್ಕೆ ಬಂದು ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಹೇಳಬೇಕು. ಅಲ್ಲಿಯವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದವು.
ಈ ವೇಳೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ಪ್ರಕರಣದ ಆರೋಪಿಯಾಗಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಖಂಡನೀಯ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ವಿಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆ ಸಭಾಪತಿ ಸಲೀಂ ಅಹ್ಮದ್ ಅವರು ಪ್ರಶ್ನೋತ್ತರ ಕಲಾಪ ನಡೆಸಲು ಮುಂದಾದರು. ಆದರೆ, ಬಿಜೆಪಿ-ಜೆಡಿಎಸ್ ಸದಸ್ಯರು ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳದೆ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದರು. ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆ ಮುಗಿದ ಬಳಿಕವೂ ಗದ್ದಲ ಮುಂದುವರಿಯಿತು.
ನ್ಯಾಯಾಲಯಕ್ಕಿಂತ ತಾವು ದೊಡ್ಡವರೇ? : ಯು.ಟಿ.ಖಾದರ್
ಬಿಜೆಪಿ ಸದಸ್ಯರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದ ತೀರ್ಪು ಬಂದಿರುವುದನ್ನು ಪ್ರಸ್ತಾಪಿಸಿದರು. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಒತ್ತಾಯದ ಕುರಿತು ಪ್ರಶ್ನಿಸಿದ ಖಾದರ್, ನ್ಯಾಯಾಲಯಕ್ಕಿಂತ ತಾವು ದೊಡ್ಡವರೇ ಎಂಬ ರೀತಿಯಲ್ಲಿ ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ರಾಜಕೀಯ ಮತ್ತು ಕಾನೂನು ವಿಚಾರಗಳನ್ನು ಮುಂದಿಟ್ಟುಕೊಂಡು ಎರಡೂ ಬಣಗಳ ನಡುವೆ ವಾಗ್ವಾದ ನಡೆಯಿತು.