×
Ad

ಸಕಲೇಶಪುರ: ಗುಂಪಿನಿಂದ ಬೇರ್ಪಟ್ಟು ನಿತ್ರಾಣಗೊಂಡ ಕಾಡಾನೆ ಸಾವು

Update: 2023-07-01 17:38 IST

ಸಕಲೇಶಪುರ: ಗುಂಪಿನಿಂದ ಬೇರ್ಪಟ್ಟು ಕಾಡಾನೆಯೊಂದು ನಿತ್ರಾಣಗೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಠಸಾಗರ ಸಮೀಪ ಶನಿವಾರ ವರದಿಯಾಗಿದೆ.

21 ಕಾಡಾನೆಗಳ ಗುಂಪಿನಲ್ಲಿದ್ದ ಕಾಂತಿ ಎಂಬ ಹೆಸರಿನ ಕಾಡಾನೆ ಹಿಂಡಿನಿಂದ ಬೇರ್ಪಟ್ಟಿದ್ದು ನೀರು ಕುಡಿಯಲು ಬಂದಾಗ ಕೆರೆಯ ದಡದಲ್ಲಿ ನಿತ್ರಾಣಗೊಂಡು ಮಲಗಿದೆ. ಸ್ಥಳೀಯರು ಬೆಳಗ್ಗೆ ಕಾಫಿ ತೋಟಕ್ಕೆ  ತೆರಳಿದ್ದ ವೇಳೆ ಕಾಡಾನೆ ಒಂದೇ ಕಡೆ ಮಲಗಿ ಒದ್ದಾಡುತ್ತಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಶು ವೈದ್ಯರೊಂದಿಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಮಧ್ಯಾಹ್ನ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕಾಂತಿ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.

ಪಶು ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾಂತಿಯ ಅಂತ್ಯ ಸಂಸ್ಕಾರ ನಡೆಸಿದರು.

ಫುಡ್ ಪಾಯ್ಸನ್‌ನಿಂದ ಕಾಡಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಆರ್‌ಎಫ್‌ಓ ಶಿಲ್ಪಾ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News