ಡಿ.ಕೆ.ಸುರೇಶ್ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ವದಂತಿಯನ್ನು ಯಾರು ಹಬ್ಬಿಸಿದ್ದಾರೋ ಗೊತ್ತಿಲ್ಲ : ಮಹದೇವಪ್ಪ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಂದೂ ಸ್ವಜನ ಪಕ್ಷಪಾತ ಮಾಡಿಲ್ಲ. ಆದರೆ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಯಿತು. ಈ.ಡಿ ಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕುವ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಷ್ಟ್ರಮಟ್ಟದ ಜನ ನಾಯಕ. ಮುಡಾ ಹಗರಣದಲ್ಲಿ ಅವರ ಹಾಗೂ ಅವರ ಕುಟುಂಬ ಸದಸ್ಯರ ಹೆಸರುಗಳು ಕೇಳಿ ಬಂದಿದ್ದರಿಂದ ಮಾನಸಿಕವಾಗಿ ಅವರು ನೊಂದಿದ್ದರು. ಆದರೆ, ಎದೆಗುಂದಿರಲಿಲ್ಲ ಎಂದು ಹೇಳಿದರು.
ಬಿಜೆಪಿಯವರು ಸುಳ್ಳನ್ನೆ ಸತ್ಯ ಮಾಡಲು ಹೋದರು. ಇಲ್ಲಸಲ್ಲದ ಕಥೆಗಳನ್ನು ಕಟ್ಟಿದರು. ಬಿಜೆಪಿ ಹಾಗೂ ಜೆಡಿಎಸ್‍ನವರು ಸೇರಿಸಿಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿದರು. ಆದರೆ, ಅಂತಿಮವಾಗಿ ನ್ಯಾಯಾಲಯದ ತೀರ್ಪು ಟೀಕೆ ಮಾಡುವವರ ಬಾಯಿ ಮುಚ್ಚಿಸಿದೆ ಎಂದು ಮಹದೇವಪ್ಪ ಅಭಿಪ್ರಾಯಪಟ್ಟರು.
ಡಿ.ಕೆ.ಸುರೇಶ್ ನನಗೆ ಫೋನ್ ಮಾಡಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ವದಂತಿಯನ್ನು ಯಾರು ಹಬ್ಬಿಸಿದ್ದಾರೋ ನನಗೆ ಗೊತ್ತಿಲ್ಲ. ಅವರು ನನ್ನ ಜೊತೆ ಫೋನ್‍ನಲ್ಲಿ ಮಾತನಾಡಿಯೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ರಚನೆ ಮಾಡಿರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಅಲ್ಲಿ ಏನೆಲ್ಲ ಘಟನೆಗಳು ನಡೆದಿವೆ ಎಂಬುದರ ಕುರಿತು ಎಸ್‍ಐಟಿ ತನಿಖೆ ಮಾಡಿ, ಸತ್ಯಾಂಶ ಹೊರಗೆ ತರುತ್ತದೆ. ಇನ್ನೂ ಎಸ್‍ಐಟಿ ತನಿಖೆಯನ್ನೆ ಆರಂಭಿಸಿಲ್ಲ ಆಗಲೇ ವಿರೋಧ ಯಾಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.