×
Ad

‘ಭಾರತ ಹಿಂದೂರಾಷ್ಟ್ರ ಆಗಲಿದೆ’ ಎಂದು ಹೇಳುವುದು ಹಾಸ್ಯಾಸ್ಪದ : ಸಚಿವ ಡಾ.ಮಹದೇವಪ್ಪ

Update: 2025-11-10 21:10 IST

ಬೆಂಗಳೂರು : ‘ಈ ಕ್ಷಣಕ್ಕೂ ಜಾತೀಯ ಅಸಮಾನತೆಯ ಕೂಪವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸರಿ ಪಡಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದೇ, ಅಸಮಾನತೆಯನ್ನೇ ಪೋಷಿಸಿಕೊಂಡು ಬದುಕಿರುವ ಆರೆಸ್ಸೆಸ್‍ನ ಮೋಹನ್ ಭಾಗವತ್ ಅಂತಹವರು, ಆಗಾಗ್ಗೆ ಪ್ರತ್ಯಕ್ಷರಾಗಿ, ಭಾರತ ಹಿಂದೂ ರಾಷ್ಟ್ರ ಆಗಲಿದೆ ಎಂದು ಹೇಳುವುದು ಹಾಸ್ಯಾಸ್ಪದ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಭಾರತವು ಸರ್ವಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಒಳಗೊಂಡಂತಹ ಜಾತ್ಯತೀತ ದೇಶ. ಇದನ್ನೇ ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ, ಒಂದು ದಿನವೂ ಈ ದೇಶದ ಸಂವಿಧಾನದ ಪುಟಗಳಲ್ಲಿ ಏನಿದೆ ಎಂಬುದನ್ನು ಕಣ್ಣೆತ್ತಿಯೂ ನೋಡದೇ ಬರೀ ಮನುಸ್ಮೃತಿಯನ್ನೇ ಭಾಗವತ್‍ಗೆ ಧರ್ಮ ಎಂದರೆ ಏನೆಂಬುದು ಈವರೆಗೂ ತಿಳಿದಿಲ್ಲ’ ಎಂದು ಟೀಕಿಸಿದ್ದಾರೆ.

‘ಈ ನೆಲದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಬಹಳಷ್ಟು ಮಂದಿ ಸಂತರು, ಧರ್ಮ ಎಂದರೆ ಏನು ಎಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರೂ ತಮಗೆ ಕುಡಿಯಲು ನೀರುಕೊಡದ, ತಮ್ಮನ್ನು ಸಮಾನವಾಗಿ ಕಾಣದ ಹಿಂದೂಧರ್ಮದ ಅಮಾನವೀಯತೆಯನ್ನು ಪ್ರಶ್ನಿಸಿ, ಆ ಧರ್ಮವನ್ನೇ ತೊರೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

‘ಹೀಗಿರುವಾಗ ಭಾರತ ಹಿಂದೂರಾಷ್ಟ್ರ ಆಗುತ್ತದೆ ಎಂದು ಆಗಾಗ್ಗೆ ಹೇಳುತ್ತಲೇ ಇರುವ ಮೋಹನ್ ಭಾಗವತ್ ಮೊದಲು ದೇಶದ ಜನರ ಕ್ಷಮೆ ಯಾಚಿಸಲಿ. ನೊಂದಾಯಿತವಲ್ಲದ ಮತ್ತು ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದುಕೊಂಡು ಇರುತ್ತಿದ್ದ ಸಾವರ್ಕರ್ ಸಿದ್ಧಾಂತ ಪ್ರೇರಿತ ಆರೆಸ್ಸೆಸ್ ಸಂಸ್ಥೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿ ದೇಶದ ಐಕ್ಯತೆ-ಸಾಮರಸ್ಯದ ಆತ್ಮವನ್ನು ಹಾಳು ಮಾಡುತ್ತಿರುವ ಭಾಗವತ್ Extra Constitutional Authority ಆಗಿ ವರ್ತಿಸುವ ಪ್ರವೃತ್ತಿಯನ್ನು ಮೊದಲು ನಿಲ್ಲಿಸಲಿ’ ಎಂದು ಡಾ.ಮಹದೇವಪ್ಪ ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News