‘ಕಾವೇರಿ ನೀರಿನ ಸಮಸ್ಯೆ’ | ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಲಿ: ಪ್ರಧಾನಿ ಮೋದಿಗೆ ಎಚ್.ಡಿ.ದೇವೇಗೌಡ ಪತ್ರ
ಎಚ್.ಡಿ.ದೇವೇಗೌಡ
ಬೆಂಗಳೂರು : ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿಂದ ಕರ್ನಾಟಕ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆ ಎದುರಿಸುತ್ತಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದ ಸಾರಾಂಶ: ಕರ್ನಾಟಕದಲ್ಲಿ ಈ ವರ್ಷ ವಾಡಿಕೆಗಿಂತ ಶೇ.35ರಿಂದ 40ರಷ್ಟು ಕಡಿಮೆ ಮಳೆಯಾಗಿದ್ದು, ಜಲಾಶಯಗಳು ತಮ್ಮ ಸಾಮಥ್ರ್ಯದ ಶೇ.50ರಿಂದ 55ರಷ್ಟೂ ಭರ್ತಿಯಾಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ತಮಿಳುನಾಡಿನ ಒತ್ತಡಕ್ಕೆ ಮಣಿದು ಕರ್ನಾಟಕದಿಂದ ನೀರು ಬಿಡುಗಡೆ ಮಾಡುವಂತೆ ಪದೇಪದೇ ಸೂಚಿಸುತ್ತಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಕುಡಿಯುವ ನೀರಿನ ಅಗತ್ಯಕ್ಕೆ ತೊಂದರೆಯಾಗುವ ಆತಂಕವಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಕುಡಿಯುವ ನೀರಿಗೆ ರಾಷ್ಟ್ರೀಯ ಜಲ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಹೀಗಾಗಿ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸದೆ ನೀರು ಬಿಡುಗಡೆಗೆ ಒತ್ತಾಯಿಸುವುದು ಸರಿಯಲ್ಲ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ‘ಸಿಡಬ್ಲ್ಯೂಎಂಎ’ಗೆ ನೀಡಿರುವ ಅಧಿಕಾರಗಳನ್ನು ಮರುಪರಿಶೀಲಿಸಬೇಕು ಎಂದು ದೇವೇಗೌಡ ಆಗ್ರಹಿಸಿದ್ದಾರೆ.
2025ರ ನ.13ರ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ತನ್ನ ಪಾಲಿನ ನೀರನ್ನು ರಾಜ್ಯದ ಹಿತದೃಷ್ಟಿಯಿಂದ ಬಳಸಿಕೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಆದುದರಿಂದ, ಸಿಡಬ್ಲ್ಯೂಎಂಎ ಅಧಿಕಾರಗಳನ್ನು ಕೆಳಹರಿವಿನ ನೀರು ಬಿಡುಗಡೆ ಮೇಲ್ವಿಚಾರಣೆಗೆ ಸೀಮಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾವೇರಿ ನ್ಯಾಯಮಂಡಳಿಯ 2007ರ ಅಂತಿಮ ತೀರ್ಪನ್ನು ಬದಲಾಗಿರುವ ಹವಾಮಾನ ಪರಿಸ್ಥಿತಿ, ಮಳೆಯ ಅನಿಶ್ಚಿತತೆ ಹಾಗೂ ಜಲ ಲಭ್ಯತೆಯ ಆಧಾರದಲ್ಲಿ ಮರುಪರಿಶೀಲಿಸಬೇಕು. ತಮಿಳುನಾಡು ಹೊಸ ನ್ಯಾಯಮಂಡಳಿ ರಚನೆಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ತೀರ್ಪಿನ ಮರುಪರಿಶೀಲನೆಯನ್ನೂ ಅದಕ್ಕೆ ವಹಿಸಬೇಕು ಎಂದು ದೇವೇಗೌಡ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ ತುರ್ತಾಗಿ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದಲ್ಲದೆ, ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ನೀರು ಹಂಚಿಕೆ ಮಾಡಿರುವುದು ಅನ್ಯಾಯವಾಗಿದ್ದು, ಸಮಾನತೆ ಮತ್ತು ನ್ಯಾಯಸಮ್ಮತ ತತ್ವದಡಿ ರಾಜ್ಯದ ಪಾಲು ಹೆಚ್ಚಿಸಬೇಕು ಎಂದು ದೇವೇಗೌಡ ಒತ್ತಾಯಿಸಿದ್ದಾರೆ.
ಸಿಡಬ್ಲ್ಯೂಎಂಎ ಅಧಿಕಾರಗಳ ಪರಿಷ್ಕರಣೆ, ಕಾವೇರಿ ತೀರ್ಪಿನ ಮರುಪರಿಶೀಲನೆ, ಮೇಕೆದಾಟು ಯೋಜನೆಗೆ ಅನುಮೋದನೆ ಹಾಗೂ ನದಿ ಜೋಡಣೆ ಯೋಜನೆಯ ಅಂತಿಮ ಹಂಚಿಕೆ ಕುರಿತು ಕೇಂದ್ರ ಜಲಶಕ್ತಿ ಸಚಿವಾಲಯ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ದೇವೇಗೌಡರು ಪ್ರಧಾನಿಗೆ ಮನವಿ ಮಾಡಿದ್ದಾರೆ.