ʼಆರೆಸ್ಸೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ : ಎಚ್‌ಡಿಕೆ ವಿರುದ್ಧ ಎಚ್.ಸಿ.ಮಹದೇವಪ್ಪ ಟೀಕೆ
ಎಚ್.ಡಿ.ಕುಮಾರಸ್ವಾಮಿ/ಎಚ್.ಸಿ.ಮಹದೇವಪ್ಪ
ಬೆಂಗಳೂರು : ʼಎಚ್.ಡಿ.ಕುಮಾರಸ್ವಾಮಿ ಅವರೇ, ಹಿಂದೆ ತಾವೇ ಭಗವದ್ಗೀತೆಯ ಅಪ್ರಸ್ತುತತೆಯ ಬಗ್ಗೆ ಮತ್ತು ಸರಕಾರವು ಹೊಂದಿರಬೇಕಾದ್ದ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದೀರಿ. ಈಗ ಕೋಮುವಾದಿ ಆರೆಸ್ಸೆಸ್ ಅನ್ನು ಬೆಂಬಲಿಸಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.
‘ಪಠ್ಯದಲ್ಲಿ ಭಗವದ್ಗೀತೆ ಬೋಧನೆ’ ಸಂಬಂಧ ಕೇಂದ್ರ ಶಿಕ್ಷಣ ಸಚಿವರಿಗೆ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿರುವ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ʼಮಕ್ಕಳ ತಲೆಗೆ ಕೇವಲ ಧಾರ್ಮಿಕತೆ ತುಂಬುವುದನ್ನು ಬಿಟ್ಟು ಒಂದಷ್ಟು ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸಮಾನತೆಯ ಜ್ಞಾನವನ್ನು ತುಂಬುವ ಕೆಲಸ ಮಾಡಿ. ಕಾರಣ ಈ ದೇಶಕ್ಕೆ ಬೇಕಿರುವುದು, ಸಂವಿಧಾನಾತ್ಮಕ ತಿಳುವಳಿಕೆಯೇ ವಿನಃ, ಧಾರ್ಮಿಕತೆಯ ಹಾದಿಯಲ್ಲ. ಈ ವಿಷಯ ನಿಮಗೂ ಮತ್ತು ಮತ್ತು ಜೆಡಿಎಸ್ ಪಕ್ಷಕ್ಕೂ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದುʼ ಎಂದು ಅವರು ತಿಳಿಸಿದ್ದಾರೆ.
"ಭಗವದ್ಗೀತೆ ಕಲಿಯುದರಿಂದ ಜನರಿಗೆ ಉಪಯೋಗವಾಗುತ್ತಾ ಎಂದು ಕೇಳಿದ್ದ ಕುಮಾರಸ್ವಾಮಿ ಅವರು ಈ ದಿನ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬೇಕು ಎಂದು ಪತ್ರ ಬರೆದಿರುವುದು ಅವರ ಸೈದ್ಧಾಂತಿಕ ಅಂಧಃಪತನಕ್ಕೆ ಹಿಡಿದ ಕನ್ನಡಿ. ಸಂವಿಧಾನದ ಬಲದಿಂದ ಸಚಿವರಾಗಿರುವ ಕುಮಾರಸ್ವಾಮಿ ಅವರು ಎಲ್ಲರಿಗೂ ಕಲಿಸಿ ಎಂದು ಪತ್ರ ಬರೆದಿದ್ದರೆ ಅವರಿಗೂ ಅವರ ಪಕ್ಷದ ಅಸ್ತಿತ್ವಕ್ಕೂ ಒಂದು ಅರ್ಥ ಇರುತ್ತಿತ್ತು. ಆದರೆ ಸೈದ್ಧಾಂತಿಕವಾಗಿ ಬಹಳಷ್ಟು ಗೊಂದಲದಲ್ಲಿ ಇರುವ ಕುಮಾರಸ್ವಾಮಿ ಅವರು ಭಗವದ್ಗೀತೆಯ ಹಿಂದೆ ಬಿದ್ದು ಮಕ್ಕಳ ಮನಸ್ಸಿಂದ ಪ್ರಜಾಸತ್ತಾತ್ಮಕ ತಿಳುವಳಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದು ಇದೊಂದು ಅಪಾಯಕಾರಿ ಹೇಳಿಕೆಯಾಗಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ"
ಎಚ್.ಸಿ.ಮಹದೇವಪ್ಪ, ಸಚಿವ