ಧರ್ಮಸ್ಥಳ ಪ್ರಕರಣ | ವಕೀಲ ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಕೀಲ ಎನ್. ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ವಕೀಲ ಮಂಜುನಾಥ್ ಅವರಿಗೆ ಸೆಪ್ಟೆಂಬರ್ 1ರಂದು ನೀಡಲಾಗಿದ್ದ ಸಮನ್ಸ್‌ಗೆ ಅರ್ಜಿಯ ಮುಂದಿನ ವಿಚಾರಣೆವರೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬೆಂಗಳೂರಿನ ವಕೀಲ ಎನ್. ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಪ್ರಕರಣದ ದೂರುದಾರ ಧರ್ಮಸ್ಥಳದ ನಿವಾಸಿ ರಘುರಾಮ ಶೆಟ್ಟಿ (44) ಹಾಗೂ ಬೆಳ್ತಂಗಡಿ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ.
ಕಕ್ಷಿದಾರರ ಮಾಹಿತಿ ಅಥವಾ ಅವರಿಗೆ ನೀಡಿದ ಸಲಹೆಗೆ ಸಂಬಂಧಿಸಿದಂತೆ ಕಾನೂನು ವೃತ್ತಿಪರರಿಗೆ (ವಕೀಲರಿಗೆ) ತನಿಖಾ ಸಂಸ್ಥೆಗಳು/ಪೊಲೀಸರು ಸಮನ್ಸ್ ಜಾರಿ ಮಾಡುವುದು ಅಸಮರ್ಥನೀಯ ಹಾಗೂ ಕಾನೂನು ವೃತ್ತಿಯ ಸ್ವಾಯತ್ತತೆಗೆ ಒಡ್ಡುವ ಬೆದರಿಕೆ ಎನಿಸಿಕೊಳ್ಳಲಿದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.