×
Ad

ರೈಲ್ವೇ ಇಲಾಖೆಯಿಂದ ದಲಿತರ ಮನೆ ನೆಲಸಮ; ಸ್ಥಳ ಪರಿಶೀಲನೆ ನಡೆಸಲು ಎಡಿಎಲ್‌ಆರ್‌ಗೆ ಹೈಕೋರ್ಟ್ ನಿರ್ದೇಶನ

Update: 2025-11-29 22:31 IST

ಬೆಂಗಳೂರು : ನಗರದ ಕೆ.ಜಿ.ಹಳ್ಳಿಯ ಬಳಿ ದಲಿತ ಕುಟುಂಬಗಳ 29 ಮನೆಗಳನ್ನು ರೈಲ್ವೇ ಇಲಾಖೆ ನೆಲಸಮಗೊಳಿಸಿರುವ ಹಿನ್ನೆಲೆಯಲ್ಲಿ ರೈಲ್ವೆ ಜಾಗ ಯಾವುದು, ಸಂತ್ರಸ್ತರ ಜಾಗ ಯಾವುದು ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ (ಎಡಿಎಲ್‌ಆರ್‌) ಹೈಕೋರ್ಟ್ ನಿರ್ದೇಶಿಸಿದೆ.

ಕೆ.ಜಿ. ಹಳ್ಳಿಯ ಎಚ್‌ಬಿಆರ್ 1ನೇ ಹಂತ ವಾರ್ಡ್ ನಂಬರ್ 23ರಲ್ಲಿನ ಸರ್ವೆ ನಂಬರ್ 71ರಲ್ಲಿ ನಿರ್ಮಿಸಲಾಗಿದ್ದ ಮನೆ ಕಳೆದುಕೊಂಡಿರುವ ಯು. ರಾಣಿ ಸೇರಿ 14 ಮಂದಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಇದೇ ವೇಳೆ, 29 ಸಂತ್ರಸ್ತ ಕುಟುಂಬಗಳಿಗೆ ಸ್ಥಳೀಯ ಲಿಡ್ಕರ್‌ ಭವನದಲ್ಲಿ ಕಲ್ಪಿಸಲಾಗಿರುವ ತಾತ್ಕಾಲಿಕ ವಸತಿ ಸೌಕರ್ಯವನ್ನು ಜನವರಿ 15ರವರೆಗೆ ಮುಂದುವರಿಸುವಂತೆ ಜಿಬಿಎ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ.ಆರ್‌. ಮೋಹನ್‌, ಬಿಡಿಎ ಅಭಿವೃದ್ಧಿಪಡಿಸಿ ಜಾಗ ಹಂಚಿಕೆ ಮಾಡಿದ ಬಡಾವಣೆಯಲ್ಲಿ ಪಾಲಿಕೆ ಮಂಜೂರು ಮಾಡಿದ ಹಣದಲ್ಲಿ ಸಂತ್ರಸ್ತ ಕುಟುಂಬಗಳು 29 ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವು. ಆದರೆ, ರೈಲ್ವೆ ಇಲಾಖೆ ಅವುಗಳನ್ನು ನೆಲಸಮಗೊಳಿಸಿದೆ. ಎರಡೂ ಬೇರೆ ಬೇರೆ ಸರ್ವೇ ನಂಬರ್‌ ಆಗಿದ್ದು, ರೈಲ್ವೇ ಇಲಾಖೆಯ ಜಾಗ ಸರ್ವೇ ನಂಬರ್‌ 70ರಲ್ಲಿದೆ ಎಂದು ವಿವರಿಸಿದರು. ರೈಲ್ವೇ ಇಲಾಖೆ ಪರ ವಕೀಲರೂ ಸಹ ಭೂಮಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವಾದ ಆಲಿಸಿದ ನ್ಯಾಯಪೀಠ, ರೈಲ್ವೇ ಇಲಾಖೆಗೆ ಸೇರಿದ ಭೂಮಿ ಯಾವುದು, ಅರ್ಜಿದಾರರ ಭೂಮಿ ಯಾವುದು ಎಂಬ ಬಗ್ಗೆ ಡಿಸೆಂಬರ್ 7ರಂದು ಸ್ಥಳ ಪರಿಶೀಲನೆ ನಡೆಸಿ, ಡಿಸೆಂಬರ್ 11ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ಎಡಿಎಲ್‌ಆರ್‌ಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?

ಬಿಡಿಎ 1985ರಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. 2015-16ರಲ್ಲಿ ಬಿಬಿಎಂಪಿ ಮನೆ ಕಟ್ಟಿಸಿಕೊಳ್ಳಲು ಪ್ರತಿಯೊಬ್ಬರಿಗೆ 3 ಲಕ್ಷ ರೂ. ಸಹಾಯಧನ ನೀಡಿತ್ತು. ಎಸ್ಸಿ-ಎಸ್ಟಿ ಕುಟುಂಬಗಳು ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದವು. ಅವರಿಗೆ ಬಿಬಿಎಂಪಿ ವತಿಯಿಂದ ಮೂಲಸೌಕರ್ಯ ಕಲ್ಪಿಸಿ, ಹಕ್ಕುಪತ್ರಗಳನ್ನು ಕೂಡ ವಿತರಿಸಲಾಗಿದೆ. ಈ ನಡುವೆ ರೈಲ್ವೇ ಇಲಾಖೆ ಯಾವುದೇ ನೋಟಿಸ್‌ ನೀಡದೆ ಅಕ್ಟೋಬರ್ 31ರಂದು ಏಕಾಏಕಿ ಬುಲ್ಡೋಜರ್‌ ತಂದು 29 ಮನೆಗಳನ್ನು ನೆಲಸಮಗೊಳಿಸಿತ್ತು. ಇದರಿಂದ, ನೂರಾರು ದಲಿತ ಕುಟುಂಬಗಳು ಬೀದಿಪಾಲಾಗಿದ್ದು, ಸದ್ಯ ಅವರೆಲ್ಲರಿಗೂ ಸ್ಥಳೀಯ ಲಿಡ್ಕರ್‌ ಭವನದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News