×
Ad

ಮಾಹಿತಿ ಸತ್ಯವೆಂದು ಅಫಿಡವಿಟ್ ಸಲ್ಲಿಸಲು ಏಕೆ ಹಿಂಜರಿಕೆ?: ಭೂಕಬಳಿಕೆ ಪ್ರಕರಣದಲ್ಲಿ ರವಿಶಂಕರ್‌ ಗುರೂಜಿಗೆ ಹೈಕೋರ್ಟ್ ಪ್ರಶ್ನೆ

Update: 2026-01-22 22:11 IST

 ರವಿಶಂಕರ್‌ ಗುರೂಜಿ | Photo Credit : PTI

ಬೆಂಗಳೂರು: ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಆಧ್ಯಾತ್ಮಿಕ ನಾಯಕ ರವಿಶಂಕರ್ ಗುರೂಜಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕಂಡುಬಂದ ದೋಷವನ್ನು ಸರಿಪಡಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ. ನಿಗದಿತ ಅವಧಿಯೊಳಗೆ ದೋಷ ಸರಿಪಡಿಸದಿದ್ದಲ್ಲಿ, ಪ್ರಕರಣದ ಮುಂದಿನ ತನಿಖೆಗೆ ತಡೆ ನೀಡಿ ಜನವರಿ 13ರಂದು ನೀಡಿದ್ದ ಮಧ್ಯಂತರ ಆದೇಶವನ್ನು ರದ್ದುಪಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 528ರೊಂದಿಗೆ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಸಲ್ಲಿಸುವ ರಿಟ್ ಅರ್ಜಿಗೆ, ಅರ್ಜಿದಾರರು ಅರ್ಜಿಯಲ್ಲಿನ ವಿಷಯಗಳು ಸತ್ಯವೆಂದು ದೃಢಪಡಿಸುವ ಅಫಿಡವಿಟ್ ಸಲ್ಲಿಸುವುದು ಕಡ್ಡಾಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ಅವರು, ಈ ಪ್ರಕರಣದಲ್ಲಿ ರವಿಶಂಕರ್ ಗುರೂಜಿ ಅವರು ಸ್ವತಃ ಅಫಿಡವಿಟ್ ಸಲ್ಲಿಸಿಲ್ಲ. ಬದಲಾಗಿ ಆಶ್ರಮದ ಭಕ್ತ ಸುಬ್ರಹ್ಮಣ್ಯ ಅವರು ಅಫಿಡವಿಟ್ ಸಲ್ಲಿಸಿರುವುದು ಕಾನೂನುಬದ್ಧವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಕಾರಣದಿಂದ ಅರ್ಜಿ ದೋಷಪೂರಿತವಾಗಿದ್ದು, ಸರಕಾರದ ಪರವಾಗಿ ಆಕ್ಷೇಪಣೆಯ ಹೇಳಿಕೆ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ವಾದಿಸಿದರು.

ರವಿಶಂಕರ್ ಗುರೂಜಿ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನ ಕುಮಾರ್, ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರು ಲಭ್ಯವಿರಲಿಲ್ಲ. ಆದ್ದರಿಂದ ಅವರ ಅಫಿಡವಿಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, “ಇದು ತಾಂತ್ರಿಕ ವಿಷಯವಾಗಿರಬಹುದು; ಆದರೆ ಕಾನೂನಿನ ಪ್ರಕಾರ ಅಗತ್ಯ. ಇದು ದೋಷಪೂರಿತ ಅರ್ಜಿ. ಅರ್ಜಿದಾರರು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಲು ಏಕೆ ಹಿಂಜರಿಯುತ್ತಿದ್ದಾರೆ?” ಎಂದು ಪ್ರಶ್ನಿಸಿತು.

ಜೂನ್ 2022ರಲ್ಲಿ ನೀಡಿದ್ದ ತನ್ನ ಹಿಂದಿನ ಆದೇಶವನ್ನು ಉಲ್ಲೇಖಿಸಿದ ಪೀಠ, ಸಂವಿಧಾನದ 226 ಅಥವಾ 227ನೇ ವಿಧಿಗಳ ಅಡಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಆರೋಪಿಯ ಪರವಾಗಿ ಪವರ್ ಆಫ್ ಅಟಾರ್ನಿ ಹೊಂದಿರುವವರು ನಿರ್ವಹಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು. ಇದೇ ತತ್ವವು ಸೆಕ್ಷನ್ 482 CrPC ಅಡಿಯಲ್ಲಿ ಸಲ್ಲಿಸುವ ಕ್ರಿಮಿನಲ್ ಅರ್ಜಿಗಳಿಗೆ ಕೂಡ ಅನ್ವಯಿಸುತ್ತದೆ ಎಂದು ಪೀಠವು ಹೇಳಿದೆ.

ಅರ್ಜಿಯಲ್ಲಿನ ದೋಷವನ್ನು ಶುಕ್ರವಾರದೊಳಗೆ ಸರಿಪಡಿಸುವುದಾಗಿ ವಕೀಲರು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ, ಜನವರಿ 23ರಂದು ಬೆಳಿಗ್ಗೆ 10.30ರವರೆಗೆ ಸಮಯ ನೀಡಿದ್ದು, ಆ ಅವಧಿಯೊಳಗೆ ದೋಷ ಸರಿಪಡಿಸದಿದ್ದರೆ ಮಧ್ಯಂತರ ತಡೆ ಆದೇಶವು ಸ್ವಯಂಚಾಲಿತವಾಗಿ ರದ್ದುಪಡಿಸಲಾಗುತ್ತದೆ ಎಂದು ಆದೇಶಿಸಿದೆ. ಪ್ರಕರಣವನ್ನು ಜನವರಿ 23ರಂದು ಮತ್ತೆ ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಲಾಗಿದೆ.

ಬೆಂಗಳೂರು ಮಹಾನಗರ ಕಾರ್ಯಪಡೆ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ 192ಎ ಅಡಿಯಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಈ ರಿಟ್ ಅರ್ಜಿ ಸಲ್ಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News