×
Ad

ಪೌರಾಯುಕ್ತೆಗೆ ನಿಂದನೆ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ

Update: 2026-01-22 19:55 IST

ಬೆಂಗಳೂರು: ಸಚಿವ ಝಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರದ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ ವಿಚಾರಕ್ಕೆ ಶಿಡ್ಲಘಟ್ಟ ಪೌರಾಯುಕ್ತೆ ಜಿ. ಅಮೃತಾ ಹಾಗೂ ಸ್ಥಳೀಯ ಜೆಡಿಎಸ್‌ ಶಾಸಕ ಬಿ.ಎನ್‌. ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಬಿ.ವಿ. ರಾಜೀವ್‌ ಗೌಡ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌‌ಗಳನ್ನು ರದ್ದು ಕೋರಿ ಕಾಂಗ್ರೆಸ್‌ ಮುಖಂಡ ಬಿ.ವಿ. ರಾಜೀವ್‌ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು‌.

ಅರ್ಜಿಗಳಲ್ಲಿ ಯಾವುದೇ ಮೆರಿಟ್‌ ಇಲ್ಲ. ಆದ್ದರಿಂದ, ಅವುಗಳನ್ನು ವಜಾಗೊಳಿಸಲಾಗಿದೆ. ಆದೇಶದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಹಾಲಿ ಅರ್ಜಿ ಪರಿಗಣಿಸುವುದಕ್ಕಷ್ಟೇ ಸೀಮಿತವಾಗಿದ್ದು, ಆ ಅಭಿಪ್ರಾಯಗಳು ಪ್ರಕರಣ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣವೇನು?

ಸಾರ್ವಜನಿಕರ ದೂರಿನ ಮೇರೆಗೆ 'ಕಲ್ಟ್' ಚಲನಚಿತ್ರದ ಬ್ಯಾನರ್‌ ಮತ್ತು ಕಟೌಟ್‌ ತೆಗೆಸಿದ್ದಕ್ಕೆ ರಾಜೀವ್‌ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೌರಾಯುಕ್ತೆ ಅಮೃತಾ ಅವರು 2026ರ ಜನವರಿ 14ರಂದು ಶಿಡ್ಲಘಟ್ಟ ನಗರ ಠಾಣೆಗೆ ದೂರು ನೀಡಿದ್ದರು.

ಜತೆಗೆ, ಅಮೃತಾ ಅವರ ಜತೆ ಫೋನ್‌ನಲ್ಲಿ ಮಾತನಾಡುವಾಗ ಜೆಡಿಎಸ್‌ ಶಾಸಕರಾದ ಬಿ.ಎನ್‌. ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೆಡಿಎಸ್‌ ಶಿಡ್ಲಘಟ್ಟ ತಾಲೂಕು ಉಪಾಧ್ಯಕ್ಷ ಎನ್‌.ಸಿ. ಶ್ರೀನಿವಾಸ್‌ ಗೌಡ ಸಹ ದೂರು ನೀಡಿದ್ದರು. ಈ ಎರಡೂ ದೂರುಗಳ ಆಧಾರದಲ್ಲಿ ರಾಜೀವ್ ಗೌಡ ಅವರ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು.

ಇದರಿಂದ, ಎಫ್‌ಐಆರ್ ರದ್ದು ಕೋರಿ ರಾಜೀವ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ (ಜನವರಿ 20) ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ಈಗ ನೀವು ಕ್ಷಮೆ ಕೋರಿದರೂ ಬಿರುಕು ಹಾಗೆ ಉಳಿಯಲಿದೆ ಎನ್ನುವುದು ನಿಮ್ಮ ಗಮನಕ್ಕೆ ಇರಬೇಕು ಎಂದು ರಾಜೀವ್ ಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News