×
Ad

ಬಿಗ್‍ಬಾಸ್-12ರ ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Update: 2026-01-22 21:09 IST

Photo: X/@siddaramaiah

ಬೆಂಗಳೂರು: ಕಿರುತೆರೆಯ ರಿಯಾಲಿಟಿ ಶೋ ‘ಬಿಗ್‍ಬಾಸ್ ಕನ್ನಡ’ 12ನೇ ಆವೃತ್ತಿಯ ವಿಜೇತರಾಗಿರುವ ಗಿಲ್ಲಿ ನಟ ಯಾನೆ ನಟರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಶುಭ ಹಾರೈಸಿದರು.

ಗುರುವಾರ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯ ವೇಳೆ ಮುಖ್ಯಮಂತ್ರಿಗಳು ಗಿಲ್ಲಿನಟ ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಬಿಗ್‍ಬಾಸ್ ಮನೆಯಲ್ಲಿ ಸತತ 112 ದಿನಗಳ ಕಾಲ ತಮ್ಮ ಸಹಜ ನಡವಳಿಕೆ, ಹಳ್ಳಿಯ ಸೊಗಡಿನ ಮಾತುಗಾರಿಕೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಜನರ ಮನಗೆದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ದಡದಪುರ ಗ್ರಾಮದ ಗಿಲ್ಲಿನಟ, ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಗಿಲ್ಲಿನಟ ತಮಗೆ ಸಿಕ್ಕ ಜನಬೆಂಬಲ ಮತ್ತು ಪ್ರೀತಿಯ ಬಗ್ಗೆ ಹಂಚಿಕೊಂಡರು.

ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉಪಸ್ಥಿತರಿದ್ದರು.

‘ಹಳ್ಳಿಯಿಂದ ಬಂದು ತನ್ನ ಪ್ರತಿಭೆ ಮತ್ತು ಸಹಜತೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಗಳಿಸಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಹೆಸರು ತನ್ನಿ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಜನಸಾಮಾನ್ಯರ ಪರವಾಗಿ ಸದಾ ನಿಲ್ಲುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ನನ್ನ ಜೀವನದ ಸ್ಮರಣೀಯ ಕ್ಷಣ. ಬಿಗ್‍ಬಾಸ್ ಗೆಲುವು ಕೇವಲ ನನಗಷ್ಟೇ ಅಲ್ಲ, ನನ್ನಂತೆ ಹಳ್ಳಿಯಿಂದ ಕನಸು ಹೊತ್ತು ಬಂದ ಪ್ರತಿಯೊಬ್ಬರಿಗೂ ಸಂದ ಗೆಲುವು’

-ಗಿಲ್ಲಿ ನಟ, ಬಿಗ್‍ಬಾಸ್-12ರ ವಿಜೇತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News