×
Ad

ಕನಿಷ್ಠ ವೇತನ ಪರಿಷ್ಕರಣೆ ಪ್ರಶ್ನಿಸಿದ ಅರ್ಜಿ; ಶುಕ್ರವಾರ ವಿಚಾರಣೆ ನಡೆಸಲಿರುವ ಹೈಕೋರ್ಟ್

Update: 2026-07-02 18:25 IST

ಬೆಂಗಳೂರು : ರಾಜ್ಯದ 80ಕ್ಕೂ ಅಧಿಕ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ (ಜುಲೈ 3) ನಿಗದಿಪಡಿಸಿದೆ.

ವೇತನ ಪರಿಷ್ಕರಣೆ ಮಾಡಿ 2026ರ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಶಿವಮೊಗ್ಗ-ಭದ್ರಾವತಿ ಕೈಗಾರಿಕೆಗಳ ಸಂಘ, ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸೇರಿ ದಾವಣಗೆರೆಯ 28 ಜವಳಿ ಉದ್ದಿಮೆದಾರರು ಸಲ್ಲಿಸಿರುವ ಅರ್ಜಿಗಳು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು.

ಆಗ ನ್ಯಾಯಪೀಠ, ಅರ್ಜಿಗಳ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಈ ಅರ್ಜಿಗಳೂ ಸೇರಿ ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಇನ್ನುಳಿದ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ, ಶುಕ್ರವಾರ ಮಧ್ಯಾಹ್ನ 2.30ಕ್ಕೆ ಅರ್ಜಿಗಳ ವಿಚಾರಣೆ ನಿಗದಿಪಡಿಸಿತು.

ಕನಿಷ್ಠ ವೇತನ ಪರಿಷ್ಕರಣೆ ಆದೇಶ ರದ್ದು ಕೋರಿ ಕರ್ನಾಟಕದಲ್ಲಿ 2 ಸಾವಿರ ಮಾರಾಟಗಾರರನ್ನು ಹೊಂದಿರುವ ದೆಹಲಿ ಮೂಲದ ದಿ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಹಾಗೂ ಬೆಂಗಳೂರಿನಲ್ಲಿರುವ ಅದರ ನಾಲ್ಕು ಸದಸ್ಯ ಕಂಪನಿಗಳು ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ಶುಕ್ರವಾರ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News