×
Ad

ಹೈಕೋರ್ಟ್‌ ಕಟ್ಟಡ ನಿರ್ಮಾಣಕ್ಕೆ ಭೂಮಿ ಹಂಚಿಕೆ ಸಂಬಂಧ ಶೀಘ್ರದಲ್ಲೇ ನಿರ್ಣಯ; ರಾಜ್ಯ ಸರಕಾರದ ಮಾಹಿತಿ

Update: 2026-07-14 21:44 IST

ಬೆಂಗಳೂರು: ಹೊಸ ಹೈಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ ಸದ್ಯ ಬೆಂಗಳೂರು ಟರ್ಫ್ ಕ್ಲಬ್‌ (ಬಿಟಿಸಿ) ಇರುವ ಸ್ಥಳವನ್ನು ಹಂಚಿಕೆ ಮಾಡುವ ಕುರಿತು ಶೀಘ್ರದಲ್ಲೇ ನಿರ್ಣಯ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಹೊಸ ಹೈಕೋರ್ಟ್ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ 30 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿಯನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಟರ್ಫ್‌ ಕ್ಲಬ್‌ ಜಾಗವನ್ನು ಹಂಚಿಕೆ ಮಾಡುವ ಸಂಬಂಧ ಶೀಘ್ರದಲ್ಲೇ ನಿರ್ಣಯ ಹೊಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲು ಒಂದು ತಿಂಗಳು ಕಾಲಾವಕಾಶ ನೀಡಿವಿಚಾರಣೆಯನ್ನು ಆಗಸ್ಟ್‌ 28ಕ್ಕೆ ಮುಂದೂಡಿತು.

ಅರ್ಜಿಯ ಕಳೆದ ವಿಚಾರಣೆಯಲ್ಲಿ ನ್ಯಾಯಪೀಠ, ಮುಂದಿನ 30ರಿಂದ 50 ವರ್ಷಗಳ ನ್ಯಾಯಾಂಗ ಅಗತ್ಯತೆಗಳನ್ನು ಪೂರೈಸುವಂತೆ ಆಧುನಿಕ ಹೈಕೋರ್ಟ್‌ ಕಟ್ಟಡ ಇರಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News