ಬಿಜೆಪಿ, ಸಂಘಪರಿವಾರದ ಸ್ವಾರ್ಥಕ್ಕೆ ಬಡವರ ಮಕ್ಕಳ ಬದುಕು ಬಲಿಯಾಗಿದೆ : ಪ್ರಿಯಾಂಕ್ ಖರ್ಗೆ
"ಬಿಜೆಪಿ-ಆರೆಸ್ಸೆಸ್ ನೀಡಿದ ಧರ್ಮ ರಕ್ಷಣೆ ನಶೆಯನ್ನು ತಲೆಗೇರಿಸಿಕೊಂಡವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ"
ಬೆಂಗಳೂರು: "ಬಿಜೆಪಿ ಮತ್ತು ಸಂಘಪರಿವಾರದ ಸ್ವಾರ್ಥ ಸಾಧನೆಗೆ ಬಡವರ ಮನೆಯ ಮಕ್ಕಳ ಜೀವಗಳಷ್ಟೇ ಅಲ್ಲ, ಬದುಕುಗಳೂ ಬಲಿಯಾಗಿವೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಧರ್ಮ ರಕ್ಷಣೆಯ ಹೆಸರಲ್ಲಿ ಸತ್ತವರದ್ದು ಒಂದು ಕತೆಯಾದರೆ ಬದುಕಿರುವ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಕರುಣಾಜನಕ ಕತೆಗಳು ಹೊರಬರುತ್ತಿವೆ. ವೇದಿಕೆ ಮೇಲೆ ಪ್ರಚೋದನೆಯ ಭಾಷಣ ಮಾಡಿದವರಿಗೆ ಐಷಾರಾಮಿ ಬದುಕು, ವೇದಿಕೆ ಕೆಳಗೆ ನಿಂತು ಶಿಳ್ಳೆ-ಚಪ್ಪಾಳೆ ಹಾಕಿದವರದ್ದು ಶೋಚನೀಯ ಬದುಕು" ಎಂದು ಹೇಳಿದ್ದಾರೆ.
"ಬಡ ಮತ್ತು ತಳ ಸಮುದಾಯದ ಯುವಕರು ಬದುಕು ಕಟ್ಟಿಕೊಳ್ಳುವ ಮತ್ತು ಜೀವನದ ದಾರಿ ಕಂಡುಕೊಳ್ಳುವ ವಯಸ್ಸಿನಲ್ಲಿ ಅವರನ್ನು ಪ್ರಚೋದನಾತ್ಮಕ ಭಾಷಣಗಳಿಂದ ದಿಕ್ಕು ತಪ್ಪಿಸಿ, ತ್ರಿಶೂಲ ದೀಕ್ಷೆ ನೀಡಿ, ಬೀದಿಗಿಳಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡುವ ವೇದಿಕೆ ಭಾಷಣಕಾರರು ಒಂದು ದಿನವೂ ಈ ಬಡವರ ಮಕ್ಕಳ ಬದುಕಿನ ಸ್ಥಿತಿಗತಿಗಳ ಬಗ್ಗೆ ಕನಿಕರ ವ್ಯಕ್ತಪಡಿಸಿಲ್ಲ, ನೆರವು ನೀಡಿಲ್ಲ. ಈ ವೇದಿಕೆ ಭಾಷಣಕಾರರು ಒಂದು ದಿನವೂ ಬಂಧನಕ್ಕೆ ಒಳಪಟ್ಟಿಲ್ಲ, ಇವರ ಮನೆಯ ಮಕ್ಕಳು ಒಂದು ದಿನವೂ ಧರ್ಮ ರಕ್ಷಣೆಗೆ ಬೀದಿಗಿಳಿದಿಲ್ಲ. ಬಡವರ ಮಕ್ಕಳು ಕೇಸ್ ಹಾಕಿಸಿಕೊಂಡು ಕೋರ್ಟಿಗೆ ಅಲೆಯುವಾಗ ಕಾನೂನು ನೆರವು ನೀಡಿಲ್ಲ, ಆರ್ಥಿಕ ನೆರವಂತೂ ಇಲ್ಲವೇ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ಹಾಗೂ RSS ನೀಡಿದ ಧರ್ಮ ರಕ್ಷಣೆ ನಶೆಯನ್ನು ತಲೆಗೇರಿಸಿಕೊಂಡವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ, ತಮ್ಮ ಬದುಕು ಕಳೆದುಕೊಂಡಿದ್ದಕ್ಕೆ ಮರುಗುತ್ತಿದ್ದಾರೆ. ತೀರಿ ಹೋದವರ ಕುಟುಂಬದವರೂ ಸಹ ತಮ್ಮ ಮಕ್ಕಳನ್ನು ಕಳೆದುಕೊಂಡ ನೋವಿನಲ್ಲಿ ಶೋಕಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
"ಈಗಿನ ತಳ ಸಮುದಾಯಗಳ ಯುವ ಸಮುದಾಯಕ್ಕೆ ಇವರೆಲ್ಲರ ನೋವಿನ ಮಾತುಗಳು ಸರಿ ದಾರಿಯನ್ನು ತೋರುವಂತಾಗಲಿ" ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಆಶಿಸಿದ್ದಾರೆ.