‘ರಾಜ್ಯದಲ್ಲಿ ತೀವ್ರ ಬರಗಾಲದ ಭೀತಿ: ಕೇಂದ್ರದಿಂದ ಅಧ್ಯಯನ ತಂಡ ಕಳುಹಿಸಿ’ : ಪ್ರಧಾನಿಗೆ ಸಿಎಂ ಡಿ.ಕೆ.ಶಿವಕುಮಾರ್ ಪತ್ರ
PC : x/@DKShivakumar
ಬೆಂಗಳೂರು : ರಾಜ್ಯದಲ್ಲಿ ನೈಋತ್ಯ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತೀವ್ರಗೊಳ್ಳುತ್ತಿರುವ ಬರಗಾಲದ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ತಕ್ಷಣವೇ ಕೇಂದ್ರದ ತಂಡವನ್ನು ಕಳುಹಿಸಿ ಕೊಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರ್ತು ಪತ್ರ ಬರೆದಿದ್ದಾರೆ.
ಬಲಗೊಳ್ಳುತ್ತಿರುವ ಎಲ್ ನಿನೋ ಪರಿಸ್ಥಿತಿಗಳಿಂದಾಗಿ ರಾಜ್ಯವು ತೀವ್ರ ಜಲ ಮತ್ತು ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದೆ. 18 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಕೊರತೆಯಾಗಿದೆ. ಜುಲೈ 11ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕವು ಈವರೆಗೆ ಪಡೆಯಬೇಕಿದ್ದ 292 ಮಿಮೀ ಸಾಮಾನ್ಯ ಮಳೆಗೆ ಪ್ರತಿಯಾಗಿ ಕೇವಲ 203 ಮಿಮೀ ಮಳೆಯನ್ನು ಪಡೆದಿದ್ದು, ಶೇ.30ರಷ್ಟು ಮಳೆ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಜೂನ್ 5 ರಂದು ರಾಜ್ಯ ಪ್ರವೇಶಿಸಿದ ಮುಂಗಾರು, ಸುದೀರ್ಘ ವಿರಾಮದ ಹಂತದಿಂದಾಗಿ ಇಡೀ ರಾಜ್ಯವನ್ನು ಆವರಿಸಲು ಬರೋಬ್ಬರಿ 17 ದಿನಗಳನ್ನು ತೆಗೆದುಕೊಂಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ಮತ್ತು 240 ತಾಲೂಕುಗಳಲ್ಲಿ 141 ತಾಲೂಕುಗಳು ಈಗಾಗಲೇ ಅಧಿಕೃತವಾಗಿ ಮಳೆ ಕೊರತೆಯ ಪಟ್ಟಿಗೆ ಸೇರಿವೆ. ಮುಖ್ಯ ನದಿಗಳ ಜಲಾನಯನ ಪ್ರದೇಶಗಳಲ್ಲೆ ಅತ್ಯಧಿಕ ಮಳೆ ಕೊರತೆ ಉಂಟಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಶೇ.34ರಷ್ಟು ಕೊರತೆ(ಕಾವೇರಿ, ತುಂಗಾ, ಭದ್ರಾ ನದಿಗಳ ಮುಖ್ಯ ಜಲಾನಯನ ಪ್ರದೇಶ), ಕರಾವಳಿ ಪ್ರದೇಶದಲ್ಲಿ ಶೇ.30ರಷ್ಟು ಕೊರತೆ, ಉತ್ತರ ಒಳನಾಡು ಪ್ರದೇಶದಲ್ಲಿ ಶೇ.24ರಷ್ಟು, ದಕ್ಷಿಣ ಒಳನಾಡು ಪ್ರದೇಶದಲ್ಲಿ ಶೇ.18ರಷ್ಟು ಮಳೆ ಕೊರತೆ ಎದುರಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಳೆಯ ಅಭಾವವು ಅತ್ಯಂತ ನಿರ್ಣಾಯಕವಾದ ಖಾರಿಫ್ ಬಿತ್ತನೆ ಹಂತಕ್ಕೆ ನೇರ ಹೊಡೆತ ನೀಡಿದೆ. ಜುಲೈ ಮೊದಲ ವಾರದ ವೇಳೆಗೆ, ರಾಜ್ಯದ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 28.36 ಲಕ್ಷ ಹೆಕ್ಟೇರ್ (ಮಾತ್ರ ಶೇ. 34) ಬಿತ್ತನೆಯಾಗಿದೆ. ಕರ್ನಾಟಕವು ದೇಶದಲ್ಲೇ ತೊಗರಿ ಬೇಳೆಯ ಪ್ರಮುಖ ಉತ್ಪಾದಕ ರಾಜ್ಯವಾಗಿದ್ದು, ಇಲ್ಲಿ ಬೆಳೆ ವಿಫಲವಾದರೆ ದೇಶಾದ್ಯಂತ ಬೇಳೆಕಾಳುಗಳ ಬೆಲೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ನೀರು ಸಂಗ್ರಹ ಸಾಮಥ್ರ್ಯ 895.65 ಟಿಎಂಸಿ ಆಗಿದ್ದು, ಪ್ರಸ್ತುತ ಕೇವಲ 303 ಟಿಎಂಸಿ (ಶೇ.34 ರಷ್ಟು ಮಾತ್ರ) ನೀರು ಬಾಕಿ ಉಳಿದಿದೆ. ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಮಾತ್ರ ಕಾಯ್ದಿರಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲಾವಾರು ಕೃಷಿ ತುರ್ತು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬಲು ಮತ್ತು ಆರ್ಥಿಕ ನಷ್ಟವನ್ನು ತಗ್ಗಿಸಲು ಕೇಂದ್ರ ಸರಕಾರವು ತಕ್ಷಣವೇ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಕೋರಿದ್ದಾರೆ.