Bengaluru | ಮುಲಾಜಿಲ್ಲದೆ ಅನಧಿಕೃತ ಜಾಹಿರಾತುಗಳ ತೆರವುಗೊಳಿಸಿ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ನಗರದಲ್ಲಿ ಹೊಸ ಜಾಹಿರಾತು ನೀತಿ ಜಾರಿಗೆ ಬಂದ ನಂತರ ಅನಧಿಕೃತವಾಗಿ ಡಿಜಿಟಲ್ ಜಾಹಿರಾತುಗಳನ್ನು ಅಳವಡಿಸಲಾಗುತ್ತಿದೆ. ಪರವಾನಗಿ ಇಲ್ಲದೆ ಅಳವಡಿಸಿರುವ ಜಾಹಿರಾತುಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಜಿಬಿಎ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಪರವಾನಗಿ ಪಡೆದು ಜಾಹಿರಾತು ಅಳವಡಿಸಿರುವವರೂ ಸಹ, ಅನುಮೋದಿತ ಉದ್ದೇಶಕ್ಕಿಂತ ಭಿನ್ನವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.
ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಜಿಬಿಎ ವ್ಯಾಪ್ತಿಯಲ್ಲಿರುವ ಸುಮಾರು 23 ಲಕ್ಷ ಆಸ್ತಿಗಳಿಗೆ ಸರಕಾರದಿಂದಲೇ ಮನೆ-ಮನೆಗೆ ಇ-ಖಾತೆಗಳನ್ನು ವಿತರಿಸಲು ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕೃಷ್ಣಬೈರೇಗೌಡ ಸೂಚಿಸಿದರು.
ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಕ್ರಮವಹಿಸಬೇಕು. ಕಡಿಮೆ ಆಸ್ತಿ ತೆರಿಗೆ ಪಾವತಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಿ, ತೆರಿಗೆ ಪರಿಷ್ಕರಣೆ ಮಾಡಿ ಸಮರ್ಪಕವಾಗಿ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಜಿಬಿಎ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಖಾತೆ ಮಾಡಿಕೊಟ್ಟು, ಆಸ್ತಿ ತೆರಿಗೆಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವ ಕೆಲಸ ಮಾಡಬೇಕು. ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ತಿಳಿಸಿದರು.
ಜಿಐಎಸ್, ಡ್ರೋನ್ ಹಾಗೂ ಇತರೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಆಸ್ತಿಗಳ ಮಾಹಿತಿಯನ್ನು ಏಕೀಕರಿಸಿ, ವ್ಯಾಪ್ತಿಗೆ ಒಳಪಡದಿರುವ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 1,500 ಬೀದಿ ವ್ಯಾಪಾರಿಗಳಿಗೆ ಮಾತ್ರ ಸ್ಥಳಾಂತರದ ಅಗತ್ಯ ಉಂಟಾಗಿದ್ದು, 10 ಸಾವಿರಕ್ಕೂ ಹೆಚ್ಚು ಅಂಗಡಿಗಳ ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿದ ರಸ್ತೆಗಳಲ್ಲಿ ಮತ್ತೆ ಒತ್ತುವರಿ ಮಾಡಿದರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕಟ್ಟಡ ಭಗ್ನಾವಶೇಷಗಳನ್ನು ವಿಲೇವಾರಿ ಮಾಡುವ ಎಲ್ಲಾ ವಾಹನಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ, ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿರಬೇಕು ಎಂದು ಕೃಷ್ಣಬೈರೇಗೌಡ ಹೇಳಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಹಾಗೂ ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೆÇಮ್ಮಲ್ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ.ರಾಜೇಂದ್ರ ಕೆ.ವಿ., ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಆಸ್ತಿ ತೆರಿಗೆ ವಂಚಕರ ಪತ್ತೆಹಚ್ಚಿ: ಬೆಂಗಳೂರಿನಲ್ಲಿ ಒಟ್ಟು 36 ಲಕ್ಷದಷ್ಟು ಆಸ್ತಿ ಮಾಲಕರಿದ್ದರೂ, ಅವರಲ್ಲಿ ಕೇವಲ 16 ಲಕ್ಷ ಜನ ಮಾತ್ರ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಇನ್ನುಳಿದ ಅರ್ಧಕ್ಕಿಂತ ಹೆಚ್ಚಿನ ಜನ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದು ಸರಕಾರಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ. ಇಂತಹ ತೆರಿಗೆ ವಂಚಕರನ್ನು ಪತ್ತೆಹಚ್ಚಲು ಡೋನ್ ತಂತ್ರಜ್ಞಾನ ಹಾಗೂ ಜಿಪಿಎಸ್ ನೆರವಿನೊಂದಿಗೆ ಸಮೀಕ್ಷೆ ನಡೆಸಬೇಕು ಎಂದು ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
.