ರೇಣುಕಾಸ್ವಾಮಿ ತಾಯಿ ಪಾಟಿ ಸವಾಲಿಗೆ ನಿರ್ದೇಶನ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯೂ ಆಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಮೃತನ ತಾಯಿ ರತ್ನಪ್ರಭಾ ಪ್ರಾಸಿಕ್ಯೂಷನ್‌ಗೆ ಬೆನ್ನು ತಿರುಗಿಸಿಲ್ಲ ಅಥವಾ ಪ್ರತಿವಾದಿ ಪಕ್ಷದ ಕಡೆಗೆ ವಾಲಿಲ್ಲ. ತಮ್ಮ ಮುಖ್ಯ ವಿಚಾರಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳಿಂದ ಸಂಪೂರ್ಣವಾಗಿ ಹಿಂದೆಯೂ ಸರಿದಿಲ್ಲ. ಪ್ರಾಸಿಕ್ಯೂಷನ್ ಪ್ರಕರಣದ ಮೂಲ ಆಧಾರವನ್ನೂ ಅವರು ನಿರಾಕರಿಸಿಲ್ಲ. ಅಂತೆಯೇ, ಪ್ರಾಸಿಕ್ಯೂಷನ್ ಕಡೆಯಿಂದ ಪ್ರತಿವಾದಿ ಪಕ್ಷದ ಕಡೆಗೆ ಅವರು ತಮ್ಮ ನಿಷ್ಠೆ ಬದಲಾಸಿರಬಹುದು ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂಬ ಅಂಶವನ್ನು ನ್ಯಾಯಪೀಠ ಅವಲೋಕಿಸಿದೆ.
ಒಂದು ಬಿಡಿ ಹೇಳಿಕೆಯನ್ನು 'ವಿರೋಧಿ ಸಾಕ್ಷಿ'ಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಸಾಕ್ಷಿಯನ್ನು ಕಟಕಟೆಗೆ ಕರೆದ ಪಕ್ಷವು ತನ್ನ ತೃಪ್ತಿಗೆ ತಕ್ಕಂತೆ ಮೊದಲ ಹಂತದ ವಿಚಾರಣೆ ನಡೆಯಲಿಲ್ಲ ಎಂಬ ಕಾರಣಕ್ಕಾಗಿ, ಸಾಕ್ಷ್ಯ ಕಾಯ್ದೆಯ ಸೆಕ್ಷನ್ 154ರ ಅಡಿಯಲ್ಲಿನ ಪ್ರಕ್ರಿಯೆ ಬಳಸಿಕೊಂಡು ಮತ್ತೊಂದು ಸುತ್ತಿನ ಎರಡನೇ ಇನ್ನಿಂಗ್ಸ್ ವಿಚಾರಣೆಗೆ ಕೋರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ವೈರತ್ವ ಅಥವಾ ಪ್ರತಿಕೂಲ ನಿಲುವು ಎಂಬುದನ್ನು ಬಿಂಬಿಸಲು ಪ್ರಯತ್ನಿಸಲಾಗುತ್ತಿರುವ ವಿಷಯವು, ಸಾಕ್ಷ್ಯ ನುಡಿಯುವಾಗ ಆಕಸ್ಮಿಕವಾಗಿ ನೀಡಲಾದ ಒಂದು ಹೇಳಿಕೆ ಅಥವಾ ಅಜಾಗರೂಕತೆಯ ಕ್ಷಣದಲ್ಲಿ ನೀಡಿದ ಉತ್ತರವಷ್ಟೇ ಆಗಿದೆ. ಇಂತಹ ಒಂದು ಆಕಸ್ಮಿಕ ಉತ್ತರವನ್ನು, ಸಾಕ್ಷಿ ಪ್ರಕರಣವನ್ನೇ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಎಂಬ ಪ್ರಾಸಿಕ್ಯೂಷನ್ ಆಕ್ಷೇಪಣೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ತನ್ನದೇ ಆದ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಲು ಪ್ರಾಸಿಕ್ಯೂಷನ್ ನ್ಯಾಯಾಲಯದಿಂದ ಅನುಮತಿ ಪಡೆಯುವುದು ಸಲ್ಲದು. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶವು ಸಮರ್ಥನೀಯ ಕಾರಣಗಳ ಮೇಲೆ ಆಧಾರಿತವಾದ ಸುಪ್ರೀಂಕೋರ್ಟ್ ಪ್ರತಿಪಾದಿಸಿದ ತತ್ವಗಳಿಗೆ ಸಂಪೂರ್ಣ ಅನುಗುಣವಾಗಿದೆ. ಆದ್ದರಿಂದ, ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.