‘ಎಸ್‍ಐಆರ್ ಪ್ರಕ್ರಿಯೆ’ ಒಂದು ವರ್ಷಕ್ಕೆ ವಿಸ್ತರಿಸಲು ನಾಗರಿಕ ಸಂಘಟನೆಗಳ ಮುಖಂಡರ ಆಗ್ರಹ

Update: 2026-08-18 21:05 IST

ಸಾಂದರ್ಭಿಕ ಚಿತ್ರ Photo Credit : PTI 

ಬೆಂಗಳೂರು : ರಾಜ್ಯದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮಾಡಬೇಕೆಂಬ ಯಾವ ಅಗತ್ಯವೂ ಇಲ್ಲ. ತಕ್ಷಣಕ್ಕೆ ಕರ್ನಾಟಕದಲ್ಲಿ ಚುನಾವಣೆಗಳೂ ಇಲ್ಲ. ಗಣತಿ ನಮೂನೆ ಪ್ರಕ್ರಿಯೆಯನ್ನು 3 ತಿಂಗಳ ಕಾಲ ವಿಸ್ತರಿಸಿ, ಇಡೀ ಪ್ರಕ್ರಿಯೆಯನ್ನು ಒಂದು ವರ್ಷದ ಅವಧಿ ಇಟ್ಟುಕೊಂಡು ವ್ಯವಧಾನದಿಂದ ಪರಿಷ್ಕರಣೆ ನಡೆಸೆಬೇಕು ಎಂದು ನಾಗರಿಕ ಸಂಘಟನೆಗಳ ಮುಖಂಡರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ನಟ ಪ್ರಕಾಶ್ ರಾಜ್, ನಾಗರಿಕ ಸಂಘಟನೆಗಳ ಮುಖಂಡರಾದ ನೂರ್ ಶ್ರೀಧರ್, ಕೆ.ವಿ. ಭಟ್, ಶ್ರೀರಾಮ್, ತಾಹೇರ್ ಹುಸೇನ್, ಫಾ.ಅರುಣ್ ಲೂಯಿಸ್, ಸೈಯದ್ ತೌಸಿಫ್ ಮಸೂದ್, ತನ್ವೀರ್ ಅಹಮ್ಮದ್, ಐಶ್ವರ್ಯ, ಸುನೀಲ್ ಶಿರಸಂಗಿ, ಅಮ್ಜದ್ ಪಾಷಾ, ಹೇಮಂತ್, ನಾಗೇಶ್ ಅರಳಕುಪ್ಪೆ, ರವಿ ಮೋಹನ್ ಸೇರಿದಂತೆ ಇತರರು ಮುಖ್ಯಚುನಾವಣಾಧಿಕಾರಿ ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ, ಎಸ್‍ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಮಾಲೋಚನೆ ನಡೆಸಿದರು.

ಎಸ್‍ಐಆರ್ ಪ್ರಕ್ರಿಯೆಯ ಫಲಿತಾಂಶ ಅಘಾತಕಾರಿಯಾಗಿದೆ. ಇಡಿ ದೇಶದಲ್ಲೇ ಅತಿಹೆಚ್ಚು ಪ್ರಮಾಣದ ಡಿಲೀಷನ್ ಪಟ್ಟಿ ಕರ್ನಾಟಕದಲ್ಲಿ ಸಿದ್ಧವಾಗುತ್ತಿದೆ. ಈಗಾಗಲೇ 1.08 ಕೋಟಿ ಮತದಾರರು ಎಎಸ್‍ಡಿಡಿಒ ಪಟ್ಟಿಯಲ್ಲಿದ್ದಾರೆ. ಬೆಂಗಳೂರಿನ ಹೆಚ್ಚು ಕಡಿಮೆ ಅರ್ಧದಷ್ಟು ಜನ ಮತದಾರರ ಪಟ್ಟಿಯಿಂದ ಕಾಣೆಯಾಗಲಿದ್ದಾರೆ. ರಾಜ್ಯದಲ್ಲಿ 3 ಸಾವಿರ ಬೂತುಗಳಲ್ಲಿ ಡಿಲೀಷನ್ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದೆ. ಅನೇಕ ಹಿರಿಯರು ಬದುಕಿದ್ದರೂ ಮೃತರಾಗಿದ್ದಾರೆಂದು ಗುರುತಿಸಲಾಗಿದೆ. ದುಡಿಯಲು ಹೋದ ಜನರನ್ನು ‘ಗೈರು’ ಎಂದು ಡಿಲೀಟ್ ಮಾಡಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು.

ಎಸ್‍ಐಆರ್ ನಂತಹ ದೊಡ್ಡ ಪ್ರಕ್ರಿಯೆಗೆ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತು ಪ್ರಚಾರ ಚುನಾವಣಾ ಆಯೋಗದ ಕಡೆಯಿಂದ ನಡೆದಿಲ್ಲ. ಜನರಿಗೆ ಇದು ಅರ್ಥವೇ ಆಗಿಲ್ಲ. ಚುನಾವಣಾ ಆಯೋಗ ಪ್ರಕಟಣೆಗಳನ್ನು ನೀಡಿ ಜನಜಾಗೃತಿ ಮಾಡಿಸುವ ಕೆಲಸವನ್ನೇ ಮಾಡಿಲ್ಲ. ಬಿಎಲ್‍ಒ ಗಳಿಗೆ ಸೂಕ್ತ ತರಬೇತಿ ನಡೆದಿಲ್ಲ. ತರಾತುರಿಯಲ್ಲಿ ದಿನಾಂಕ ಘೋಷಣೆಯಾಗಿ, ಜನರಿಗೆ ಸೂಕ್ತ ಮಾಹಿತಿ ಇಲ್ಲದೆ, ಬಿಎಲ್‍ಒ ಗಳಿಗೆ ಸಮಗ್ರ ತರಬೇತಿ ಇಲ್ಲದೆ ಗೊಂದಲಗಳ, ಅಸ್ತವ್ಯಸ್ತತೆಗಳ ನಡುವೆ ಇಡೀ ಪ್ರಕ್ರಿಯೆ ನಡೆದಿದೆ ಎಂದು ಅವರು ವಿವರಿಸಿದರು.

ಚುನಾವಣಾ ಆಯೋಗ ಸ್ಥಳಾಂತರ, ಗೈರು, ಇತರೆ ವರ್ಗದಲ್ಲಿರುವ ಜನರನ್ನು ಡಿಲೀಟೆಡ್ ಎಂದು ಘೋಷಿಸಬಾರದು. ಬಿಎಲ್‍ಒಗಳು ಮತ್ತೊಮ್ಮೆ ಮನೆಮನೆಗೆ ಹೋಗಿ ಎಲ್ಲ ಬೂತುಗಳಲ್ಲಿಯೂ ಸ್ಥಳಾಂತರಗೊಂಡು ಬಂದು ನೆಲೆಸಿರುವ ಜನರಿಗೆ ಗಣತಿ ನಮೂನೆ ಮತ್ತು ನಮೂನೆ-8 ಅನ್ನು ನೀಡಿ, ಅವರ ಮತದ ವರ್ಗಾವಣೆಗೆ ಅವಕಾಶ ನೀಡಬೇಕು. ಹಾಗೆಯೇ ಹೊಸ ಮತದಾರರಿಗೆ ನಮೂನೆ-6 ಕೊಟ್ಟು ನೋಂದಾವಣಿ ಮಾಡಿಕೊಳ್ಳುವ ಪ್ರಕ್ರಿಯೆ ಜೊತೆಗೇ ನಡೆಯಬೇಕು. ಗೈರು ಮತ್ತು ಇತರೆ ವರ್ಗದಲ್ಲಿರುವರನ್ನು ಸಂಪರ್ಕಿಸಿ, ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿ, ಹೆಚ್ಚಿನ ಜನ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡಲು ಕ್ರಮವಹಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಕರ್ನಾಟಕದಲ್ಲಿ ಚುನಾವಣಾ ಆಯೋಗ ಸರಿಯಾಗಿ ಎಸ್‍ಐಆರ್ ಪ್ರಕ್ರಿಯೆ ಮಾಡದೆ, ಮತದಾರನಿಗೆ ಸರಿಯಾದ ಮಾಹಿತಿ ಕೊಡದೆ, ಎರಡು ಕೋಟಿ ಜನರು ನಿಮ್ಮ ಮುಂದೆ ಬಂದು ಅವರು ‘ನಮ್ಮ ಮತಹಕ್ಕನ್ನು ನಮಗೆ ವಾಪಸ್ ಕೊಡಿ’ ಅಂತ ಬೇಡಿಕೊಳ್ಳುವ ಪರಿಸ್ಥಿತಿ ಯಾಕೆ ತರುತ್ತಿದ್ದೀರಿ? ಕರ್ನಾಟಕದಲ್ಲಿ ಚುನಾವಣೆ ನಡೆಯಲು ಎರಡು ವರ್ಷ ಸಮಯವಿದೆ. ಈಗಲೇ ಅಂತಹ ತುರ್ತು ಏನಿದೆ? ಒಬ್ಬ ಪ್ರಜೆಯ ಘನತೆಯನ್ನು ಅವಮಾನಿಸುವ ಹಾಗೆ, ಅವನು ರಸ್ತೆಯಲ್ಲಿ ಬಂದು ನಿಂತುಕೊಳ್ಳುವ ಹಾಗೆ ಯಾಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ನಮೂನೆ-6 ಭರ್ತಿ ಮಾಡುವುದು ಹೊಸ ಮತದಾರ ಆಗಲು. ನಾನು ಯಾಕೆ ಈಗ ಹೊಸ ಮತದಾರ ಆಗಲಿ? ಈ ದೇಶದಲ್ಲಿ ಒಬ್ಬ ಪ್ರಜೆ ಮತ್ತೆ ಹೊಸ ಪ್ರಜೆ ಆಗಲು ಸಾಧ್ಯವೇ? ಮತದಾರರಿಗೆ ಗೌರವ ಇದೆ. ನಾವು ಈ ದೇಶದ ಪ್ರಜೆಗಳು. ಬಿಎಲ್‍ಒಗಳು ಬಂದಾಗ ಮನೆಯಲ್ಲಿ ಇರಲಿಲ್ಲ, ಸ್ಥಳಾಂತರ ಆಗಿದ್ದರೆಂದು ಅವರನ್ನು ಡಿಲೀಟ್ ಮಾಡುವುದು ಸರಿಯೇ? ನಮೂನೆ-8 ಕೊಟ್ಟರೆ ಸ್ಥಳಾಂತರ ಆದವರು ಸರಿಪಡಿಸಿಕೊಳ್ಳುತ್ತಾರೆ. ಇದು ಒಂದು ವಿತಂಡವಾದದ ತರಇದೆ. ನಾಗರಿಕ ಪ್ರಜೆಗಳ್ಯಾರು ಮತ್ತೆ ಸಾಲಿನಲ್ಲಿ ನಿಂತು, ಅವಮಾನ ಪಡೆಯಲು ಸಿದ್ದರಿಲ್ಲ ಎಂದರು.

ಸರಕಾರಕ್ಕೂ ಒತ್ತಾಯ ಮಾಡುತ್ತಿದ್ದೇವೆ. ದಯವಿಟ್ಟು ಈ ಕುರಿತು ಅಧಿವೇಶನದಲ್ಲಿಯೂ ಚರ್ಚೆ ಮಾಡಬೇಕು. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಮತದಾರರಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಜನರ ಬಳಿ ಹೋಗಿ, ಅವರ ಅಹವಾಲುಗಳನ್ನು ಕೇಳಿಸಿಕೊಂಡು, ಮತದಾರರ ಪರವಾಗಿ ಚುನಾವಣಾ ಆಯೋಗಕ್ಕೆ ಅವಧಿ ವಿಸ್ತರಣೆ ಮಾಡಲು ಮನವಿ ಮಾಡಿ. ಇಲ್ಲಿದ್ದರೆ ಎಲ್ಲ ರೀತಿಯಲ್ಲೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News