ಖರ್ಗೆ ಕುಟುಂಬದ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಜಮೀನು ಹಂಚಿಕೆ ಆರೋಪ; ದೂರಿನ ಮುಂದುವರಿಕೆಗೆ ಹೈಕೋರ್ಟ್ ನಿರ್ದೇಶನ
Photo credit: PTI
ಬೆಂಗಳೂರು: ಖಾಸಗಿ ದೂರು ಸಲ್ಲಿಕೆಯಲ್ಲಿನ ಪ್ರಮಾಣಪತ್ರದ ತಾಂತ್ರಿಕ ದೋಷವನ್ನು ಮುಂದಿಟ್ಟುಕೊಂಡು ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಬದಲಿಗೆ ವಿಚಾರಣಾ ನ್ಯಾಯಾಲಯ ಸ್ವತಃ ವಿಚಾರಣೆಗೆ ಮುಂದಾಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮಬಾಹಿರವಾಗಿ ನಿವೇಶನ ಮಂಜೂರಾತಿಗೆ ಸಂಬಂಧಿಸಿದ ದೂರಿನ ಪ್ರಕರಣವನ್ನು ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸದೆ ತಾನೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ದೂರುದಾರರೂ ಆದ 'ಲಂಚ ಮುಕ್ತ ಕರ್ನಾಟಕ ವೇದಿಕೆ' ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿ ಕುರಿತು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ದೂರಿಗೆ ಸಂಬಂಧಿಸಿದಂತೆ ಪ್ರಮಾಣಪತ್ರದಲ್ಲಿ ದೋಷಗಳಿವೆ ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗುವ ಬದಲಿಗೆ ದೋಷವನ್ನು ಪರಿಹರಿಸಿಕೊಳ್ಳಲು ದೂರುದಾರರಿಗೆ ಅವಕಾಶ ನೀಡಬೇಕಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಮಾಣಪತ್ರದಲ್ಲಿನ ದೋಷವು ದೂರುದಾರರಿಗೆ ನ್ಯಾಯಾಲಯದ ಮುಂದೆ ಕಾನೂನಿನ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಮಾಣಪತ್ರವನ್ನು ದಾಖಲಿಸಲು ನಿರ್ದೇಶಿಸುವ ಮೂಲಕ ಅದನ್ನು ಸುಲಭವಾಗಿ ಸರಿಪಡಿಸಬಹುದಾಗಿದ್ದ ಹಂತದಲ್ಲಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಅತಿಯಾದ ತಾಂತ್ರಿಕ ನಿಲುವನ್ನು ಪ್ರದರ್ಶಿಸಿದೆ ಎಂದಿರುವ ಹೈಕೋರ್ಟ್, ಸೂಕ್ತ ಮತ್ತು ಕಾನೂನಾತ್ಮಕ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಪ್ರಕರಣದ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಿ ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣವೇನು?
ಪರಿಶಿಷ್ಟ ಜಾತಿಗೆ ಸೇರಿದ ಟ್ರಸ್ಟ್ ಎಂದು ಉಲ್ಲೇಖಿಸಿ ಖರ್ಗೆ ಮತ್ತು ಅವರ ಕುಟುಂಬಸ್ಥರ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿಯಮಬಾಹಿರವಾಗಿ ಬಿಟಿಎಂ ಲೇಔಟ್‌ನಲ್ಲಿ ಎರಡು ಎಕರೆ ನಿವೇಶನ ಮಂಜೂರು ಮಾಡಲಾಗಿದೆ’ ಎಂಬುದು ದೂರುದಾರರ ಆರೋಪ. ದೂರಿನಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಭಾಯಿ ಎಂ. ಖರ್ಗೆ, ಸಂಸದ ರಾಧಾಕೃಷ್ಣ, ರಾಹುಲ್ ಎಂ.ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ ಎಂ. ಖರ್ಗೆ ಅವರನ್ನು ಆರೋಪಿಗಳನ್ನಾಗಿಸಲಾಗಿದೆ.
ಈ ಮಧ್ಯೆ, ಖಾಸಗಿ ದೂರಿನ ಪ್ರಮಾಣಪತ್ರ ಸಮರ್ಪಕವಾಗಿಲ್ಲ. ಅದು ಸುಪ್ರೀಂಕೋರ್ಟ್ ರೂಪಿಸಿರುವ ಅಂಶಗಳಿಗೆ ಅನುಗುಣವಾಗಿಲ್ಲ, ದೋಷಗಳಿವೆ ಎಂದು ಉಲ್ಲೇಖಿಸುವ ಮೂಲಕ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗಿರುವುದು ಕಾನೂನಾತ್ಮಕವಾಗಿ ತಪ್ಪು’ ಎಂದು ಆಕ್ಷೇಪಿಸಿ ದೂರುದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.