ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕುಕನೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅಗತ್ಯವಾದ ಪ್ರಾಮುಖ್ಯತೆ ನೀಡಲಾಗಿಲ್ಲ. ರಾಜ್ಯದ ಮೇಲಿನ ಮಲತಾಯಿ ಧೋರಣೆ ಈ ಬಾರಿಯೂ ಮುಂದುವರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.
ಪಟ್ಟಣದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸ್ಪಷ್ಟವಾದ ಅನ್ಯಾಯವಾಗಿದೆ ಎಂದು ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರಕಾರಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲಿನ ಹಣವನ್ನು ಸರಿಯಾಗಿ ನೀಡಿಲ್ಲ. ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರ ನೀಡಬೇಕಾಗಿದ್ದ ಪಾಲನ್ನೂ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದನ್ನು ರೈತಪರ ಬಜೆಟ್ ಎಂದು ವಿರೋಧ ಪಕ್ಷದವರು ಹೇಳುತ್ತಿರುವುದೇ ಆಶ್ಚರ್ಯಕರ ಎಂದು ಹೆಬ್ಬಾಳ್ಕರ್ ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿಯ ಹಿರಿಯ ನಾಯಕರು ಕೇಂದ್ರ ಸಚಿವ ಸಂಪುಟದಲ್ಲಿದ್ದರೂ ಸಹ ಈ ರೀತಿಯ ಅನ್ಯಾಯವಾಗಿರುವುದು ವಿಪರ್ಯಾಸಕರ ಸಂಗತಿ. ಒಟ್ಟಾರೆ ಇದು ರಾಜ್ಯದ ನಿರೀಕ್ಷೆಗಳನ್ನು ಮರೆಸಿದ, ಆಶಾದಾಯಕವಲ್ಲದ ಕೇಂದ್ರ ಬಜೆಟ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.